ಬೆಳಗಾವಿ: ರಾಜ್ಯದಲ್ಲಿ ಬೇಸಿಗೆ ಶುರುವಾಗುವ ಮುನ್ನವೇ ತಾಪಮಾನ ಹೆಚ್ಚಾಗಿತ್ತು, ಈ ಸಲದ ಬೇಸಿಗೆ ಗರಿಷ್ಠ ಬಿಸಿಯಾಗಿರುವ ಅನುಭವ ಆಗುತ್ತಿದೆ. ಜನರು ಹೊರಗಡೆ ಹೋಗಲು ಹಿಂದೆಟ್ಟು ಹಾಕುವಷ್ಟು ಸುಡುಬಿಸಿಲು ಸುಡುತ್ತಿದೆ. ಅರೆ ಕ್ಷಣವು ಹೊರಗೆ ಹೋಗಿ ಬರಲು ಆಗದಷ್ಟು ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಜನರು ಅಕ್ಷರಶಃ ಬಿಲಿಸಿನ ಬೇಗೆಯಿಂದ ಬಳಲುತ್ತಿದ್ದಾರೆ.
ಕ್ಷಾಮಕ್ಕೆ ತುತ್ತಾಗಿರುವ ಕರುನಾಡಿನಲ್ಲಿ ನದಿಗಳು ಬತ್ತಲಾರಂಭಿಸಿವೆ. ಬಹಳಷ್ಟು ಜಿಲ್ಲೆಗಳು ಗರಿಷ್ಠ ತಾಪಮಾನವನ್ನು ದಾಖಲಿಸಿವೆ. ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳು ಇನ್ನಷ್ಟು ಬರ್ಬರವಾಗಿರಲಿವೆ. ಇದರ ಬೆನ್ನಿಗೇ, ಈ ಬಾರಿ ಬರಗಾಲ (Drought In Karnataka) ತೀವ್ರವಾಗಿ ಆವರಿಸಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಅದರಲ್ಲೂ ಜಾನುವಾರುಗಳು ಮೇವು ಸಿಗದೆ ಪರದಾಡುತ್ತಿರುವ ದೃಶ್ಯ ಮನಕಲುಕುವಂತೆ ಮಾಡಿದೆ.
ಮಾತು ಬಾರದ ಮೂಕಪ್ರಾಣಿಗಳು ಮೇವು ಸಿಗದೆ ಏದುಸಿರಿನಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭೀಕರ ಬರ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೀದಿಬದಿ ಹಸುಗಳು ಮೇವು, ನೀರು ಸಿಗದೇ ಮೂಕರೋಧನೆ ಅನುಭವಿಸುತ್ತಿವೆ. ಆಹಾರ ಸಿಗದೆ ಕೆ.ಜಿ ಗಟ್ಟಲೇ ಪ್ಲಾಸ್ಟಿಕ್, ನಟ್ಟು- ಬೋಲ್ಟ್, ಕಬ್ಬಿಣದ ಚೂರು ತಿಂದು ರಾಸುಗಳು ಬೀದಿ ಹೆಣವಾಗುತ್ತಿವೆ.
ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!
ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅಭಯ್ ಹಿಶೋಭಕರ್ ಹಾಗೂ ಪಶುವೈದ್ಯ ಡಾ.ಹೆಚ್.ಬಿ.ಸಣ್ಣಕ್ಕಿ ಅವರು ಹಲವು ಹಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಜೀವ ಉಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿದ ಹಸುವಿನ ಹೊಟ್ಟೆಯಲ್ಲಿ ಅರ್ಧ ಟನ್‌ನಷ್ಟು ಪ್ಲಾಸ್ಟಿಕ್, ಕಬ್ಬಿಣ ತ್ಯಾಜ್ಯ ಪತ್ತೆಯಾಗಿದೆ. ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಹಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ಷಿಸಲಾಗಿದೆ.
ಪ್ಲಾಸ್ಟಿಕ್, ಕೈಗಾರಿಕಾ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಿದ್ದಾರೆ. ಕೂಡಲೇ ಬೆಳಗಾವಿ ಜಿಲ್ಲಾಡಳಿತ ಕ್ರಮಕೈಗೊಂಡು, ಮೇವು ಬ್ಯಾಂಕ್ ಸ್ಥಾಪಿಸಿ ಬೀದಿ ಹಸುಗಳ ರಕ್ಷಣೆಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಬೀದಿ ಹಸುಗಳ ಕಿವಿಗೆ ಟ್ಯಾಗ್ ಹಾಕಿ ಕಣ್ಮುಚ್ಚಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಅವುಗಳ ರಕ್ಷಣೆಗೆ ಅಧಿಕಾರಿಗಳು ಧಾವಿಸಿ, ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ