ಬೆಳಗಾವಿ: ವಿವಾದಾತ್ಮಕ ಜಮೀನಿನ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ (Family Fighting) ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಜಮೀನಿನಲ್ಲೇ ಎರಡು ಗುಂಪುಗಳು ಕುಡುಗೋಲು, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ.
ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ 7 ಜನರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಕತಿ ನಿವಾಸಿ ಅನಿಲ್ ಮುಂಗಾರಿ ಸೇರಿ 7 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಕೃಷಿಯಲ್ಲಿ ತೊಡಗಿದ್ದ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಕಾಕತಿ ನಿವಾಸಿ ಸಿದ್ದರಾಯಿ ತುಂಬರಿ ಎಂಬಾತ ಗುಂಡಾಗಳನ್ನು ಕರೆಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಿಲ್ ಮುಂಗಾರಿಗೆ ಸೇರಿದ ಜಮೀನು ಲಪಟಾಯಿಸಲು ಸಿದ್ದರಾಯಿ ತುಂಬರಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಕೋರ್ಟ್ ವಿಚಾರಣೆಯಲ್ಲಿರುವ ಜಮೀನು ಬಿಟ್ಟುಕೊಡುವಂತೆ ಸಿದ್ದರಾಯಿ ತುಂಬರಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದಾಗ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಗುಂಡಾಗಳನ್ನು ಕರೆಯಿಸಿ ಹಲ್ಲೆ ನಡೆಸಿದ್ದಾನೆ. ಸದ್ಯ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Chikkalluru Siddappaji Temple : ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ
ಮಾರಾಮಾರಿಯಲ್ಲಿ ತಂದೆ ಕಿವಿ ಕಟ್; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ
ಚಿಕ್ಕೋಡಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ (Assault Case) ನಡೆದಿತ್ತು. ಘಟನೆಯಲ್ಲಿ ಗಾಯಗೊಂಡ ತಂದೆಯನ್ನು ಕಾಪಾಡಲು ಸದಲಗಾ ಸರ್ಕಾರಿ ಆಸ್ಪತ್ರೆಯಿಂದ ಚಿಕ್ಕೋಡಿವರೆಗೂ ಮಗನೇ ಸರ್ಕಾರಿ ಆಂಬ್ಯುಲೆನ್ಸ್ ಓಡಿಸಿಕೊಂಡು ಬಂದಿದ್ದಾನೆ.
ಸದಲಗಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಚಾಲಕ ಇಲ್ಲದ ಹಿನ್ನೆಲೆಯಲ್ಲಿ ಯುವಕನೇ ಆಂಬ್ಯುಲೆನ್ಸ್ ಚಲಾಯಿಸಿಕೊಂಡು ಬಂದು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದು ಹಾಳಾದ ಆರೋಗ್ಯ ಇಲಾಖೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜನವಾಡ ಗ್ರಾಮದ ಸಿದ್ದು ಪೂಜಾರಿಗೆ ಆತನ ಪತ್ನಿ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸಿದ್ದು ಪೂಜಾರಿ ಕಿವಿ ಕಟ್ ಆಗಿತ್ತು, ಜತೆಗೆ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ತಂದೆಯನ್ನು ಕೂಡಲೇ ಬೈಕ್ ಮೇಲೆ ಕೂರಿಸಿಕೊಂಡ ಮಗ ಮಾಳು ಪೂಜಾರಿ ಸದಲಗಾ ಸರ್ಕಾರಿ ಕರೆದುಕೊಂಡು ಹೋಗಿದ್ದ.
ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಆಂಬ್ಯುಲೆನ್ಸ್ ಕೊಡಿ ಎಂದಿದ್ದಕ್ಕೆ ಆಸ್ಪತ್ರೆ ವೈದ್ಯರು ಚಾಲಕ ಇಲ್ಲ, ನೀವೇ ಆಂಬ್ಯುಲೆನ್ಸ್ ತೆದುಕೊಂಡು ಹೋಗಿ ಎಂದಿದ್ದಾರೆ. ಹೀಗಾಗಿ ಮಾಳು ಪೂಜಾರಿ ಗಾಯಾಳು ತಂದೆಯನ್ನು ಸರ್ಕಾರಿ ಆಂಬ್ಯುಲೆನ್ಸ್ ವಾಹನವನ್ನು ತಾನೇ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ