ಬೆಳಗಾವಿ: ನಿಪ್ಪಾಣಿ ಟ್ಟಣದ ಹೊರವಲಯದಲ್ಲಿ ಶುಕ್ರವಾರ ಮದ್ಯಾಹ್ನ ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಆರು ಲೇನ್ ಹೊಂದಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿಪ್ಪಾಣಿ ಹೊರವಲಯದ ಸ್ಥವನಿಧಿ ಘಾಟ್ ಪ್ರದೇಶದಲ್ಲಿ ಮದ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆದಿದೆ. ಮೃತಪಟ್ಟವರನ್ನು ಅದಗೊಂಡ ಬಾಬು ಪಾಟೀಲ್(60), ಪತ್ನಿ ಛಾಯಾ ಅದಗೊಂಡ ಪಾಟೀಲ್(55), ಚಂಪಾತಾಯಿ ಮಗದುಮ್(80), ಮಹೇಶ್ ದೇವಗೊಂಡ ಪಾಟೀಲ್(23) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ | Accidents in Bangalore | ಅಪಘಾತಗಳ ನಗರವಾಗ್ತಿದೆ ಸಿಲಿಕಾನ್ ಸಿಟಿ, 4 ತಿಂಗಳಲ್ಲಿ 231 ಜನರ ಸಾವು
ರೆನಾಲ್ಟ್ ಕ್ವಿಡ್ ಕಾರಿನಲ್ಲಿದ್ದ ಪ್ರಯಾಣಿಕರು ಕೊಲ್ಹಾಪುರದಿಂದ ಬೆಳಗಾವಿಗೆ ಆಗಮಿಸುತ್ತಿದ್ದರು. ಸ್ಥವನಿಧಿ ಘಾಟ್ ಬಳಿ ಚಲಿಸುತ್ತಿರುವಾಗ ಲಾರಿಯನ್ನು ಹಿಂದಿಕ್ಕಲು ಕಾರಿನ ಚಾಲಕ ಮುಂದಾಗಿದ್ದಾರೆ. ಈ ಸಮಯದಲ್ಲಿ ನಿಯಂತ್ರಣ ತಪ್ಪಿ ಎರಡೂ ವಾಹನ ಮುಖಾಮುಖಿಯಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವುದರಿಂದ ಅಪಘಾತದ ಭೀಕರತೆ ಹೆಚ್ಚಾಗಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಲಾರಿಯೂ ಪಲ್ಟಿಯಾಗಿ ಬಿದ್ದಿದೆ.
ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ನಿಪ್ಪಾಣಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನುಜ್ಜುಗುಜ್ಜಾಗಿರುವ ಕಾರಿನಲ್ಲಿಯೇ ಮೃತದೇಹಗಳು ಸಿಕ್ಕಿಕೊಂಡಿದ್ದು, ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿದ್ದಾರೆ. ಕಾರಿನಲ್ಲಿರುವ ಶವಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಮೃತರ ಕುರಿತು ಹೆಚ್ಚಿನ ವಿವರ ಮತ್ತಷ್ಟು ಲಭಿಸಬೇಕಿದೆ.
ಇದನ್ನೂ ಓದಿ | ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಲಾರಿ-ಖಾಸಗಿ ಬಸ್ ಡಿಕ್ಕಿಯಾಗಿ 8 ಮಂದಿ ಸಾವು