ಬೆಳಗಾವಿ: ಕನ್ನಡ ಬಾವುಟ ಹಾರಿಸಿದ್ದಕ್ಕೆ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದ ಹಾಗೂ ದೂರು ನೀಡಲು ಹೋದ ವೇಳೆ ಪೊಲೀಸರಿಂದಲೂ ಹಲ್ಲೆ ನಡೆದ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ.
ಕನ್ನಡ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದಾಗ ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದವರ ಪೈಕಿ ನನ್ನ ಕ್ಲಾಸ್‌ಮೇಟ್ ಕೂಡ ಇದ್ದ. ನಾನು ದೂರು ಕೊಡಲು ಮುಂದಾದಾಗ ಠಾಣೆಗೆ ಕರೆದುಕೊಂಡು ಹೋಗಿ ಹೆದರಿಸಿ ಎಸಿಪಿ, ಡಿಸಿಪಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಡಿಸಿಪಿ ನನ್ನ ವಿರುದ್ಧ ಅವಾಚ್ಯ ಶಬ್ದ ಬಳಸಿ ಬೈದು ಬೂಟಗಾಲಿಂದ ಒದ್ದರು. ಬಳಿಕ ನಾನು ಕನ್ನಡ ಸಂಘಟನೆಯ ಮುಖಂಡರನ್ನು ಸಂಪರ್ಕಿಸಿದೆ ಎಂದು ಬೆಳಗಾವಿಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.
ನಿನ್ನೆ ಮಧ್ಯರಾತ್ರಿ ಪೊಲೀಸ್ ಠಾಣೆಯಿಂದ ಹೊರಬಂದ ಬಳಿಕ ಹುಡುಗರು ಹೆದರಿದ್ದರು. ಅವರನ್ನು ಕರೆದುಕೊಂಡು ಬಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದ್ದೇನೆ. ವಿದ್ಯಾರ್ಥಿಯ ಮೇಲೆ ಅಶ್ಲೀಲ ಪದ ಬಳಸಿ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಕರುನಾಡ ವಿಜಯ ಸೇನೆ ಬೆಳಗಾವಿ ಜಿಲ್ಲಾ ಯುವಘಟಕ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಹೇಳಿದ್ದಾರೆ.
ಕನ್ನಡಕ್ಕೆ ಈ ಸ್ಥಿತಿಯೇ?
ಅಪ್ಪಟ ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಾರಿಸಬಾರದು ಎಂದರೆ ಏನರ್ಥ? ಬೆಳಗಾವಿಯಲ್ಲಿ ಇರುವ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಪೊಲೀಸರು ಕರ್ನಾಟಕದವರೋ ಮಹಾರಾಷ್ಟ್ರದವರೋ? ದೂರು ಸ್ವೀಕರಿಸಿ ನ್ಯಾಯ ಕೊಡಿಸಬೇಕಿದ್ದ ಪೊಲೀಸರಿಂದಲೇ ಹಲ್ಲೆ ನಡೆಯುವುದು ಎಂದರೆ ಏನರ್ಥ? ಕನ್ನಡಪರ ಹೋರಾಟಗಾರ ಸಂಪತಕುಮಾರ್ ಮನೆ ಸುತ್ತಮುತ್ತ ಪೊಲೀಸರು ಓಡಾಡುತ್ತಿದ್ದು, ದೂರುದಾರರ ಮೇಲೆ ಬೆದರಿಕೆ, ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಅಮಾಯಕ ವಿದ್ಯಾರ್ಥಿಗಳು, ಕನ್ನಡ ಪರ ಹೋರಾಟಗಾರರನ್ನು ಹಿಂಸಿಸುತ್ತಿದ್ದಾರೆ. ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ಡಿಸಿಪಿ ರವೀಂದ್ರ ಗಡಾಡಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಸ್ಪಷ್ಟನೆ
ಈ ನಡುವೆ ಪೊಲೀಸರ ಹಲ್ಲೆ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ, ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾಡಿ ಸ್ಪಷ್ಟೀಕರಣ ನೀಡಿದ್ದು, ಕಾಲೇಜಿನಲ್ಲಿ ಗಲಭೆ ಮಾಡಿದ ಎಲ್ಲರೂ ಕನ್ನಡಿಗರೇ ಎಂದು ತೇಪೆ ಹಚ್ಚಿದ್ದಾರೆ. ಇಬ್ಬರನ್ನೂ ಕರೆದು ತಾಕೀತು ಮಾಡಿದ್ದೇವೆ, ವಿದ್ಯಾರ್ಥಿಗಳು ಎಲ್ಲರೂ ಅಪ್ರಾಪ್ತರು ಎಂದು ಪ್ರಕಟಿಸಿದ್ದಾರೆ. ಪೊಲೀಸರ ಹಲ್ಲೆಯ ಬಗ್ಗೆ ಏನನ್ನೂ ತಿಳಿಸಿಲ್ಲ.
ಇದನ್ನೂ ಓದಿ | Kannada Flag | ಬೆಳಗಾವಿಯಲ್ಲಿ ಕಾಲೇಜಿಗೂ ಕಾಲಿಟ್ಟ ಭಾಷಾ ದ್ವೇಷ; ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ