Site icon Vistara News

Karnataka election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಆ್ಯಕ್ಟಿವ್; ಎಲೆಕ್ಷನ್‌ ಗೆಲ್ಲಲು ಮರಾಠ ಅಸ್ತ್ರ

Karnataka election 2023

ಬೆಳಗಾವಿ: ವಿಧಾನಸಭಾ ಚುನಾವಣೆ (Karnataka election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಬದ್ಧವೈರಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆ್ಯಕ್ಟಿವ್ ಆಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಳೇ ದ್ವೇಷ ತೀರಿಸಿಕೊಳ್ಳಲು ಗೋಕಾಕ್ ಸಾಹುಕಾರ್‌ ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ.

ಈ ಬಾರಿ ಮರಾಠ ಅಸ್ತ್ರ ಬಳಸಿ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್‌ ಜಾರಕಿಹೊಳಿ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮುಖಂಡರ ಸಭೆಯನ್ನು ಮಾಡುತ್ತಿದ್ದಾರೆ. ಈಗಾಗಲೇ ಸಾಂಬ್ರಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಖಂಡರ ಸಭೆ ನಡೆಸಿದ್ದು, ವಾರದಲ್ಲಿ ಮೂರು ದಿನ ಕ್ಷೇತ್ರದಲ್ಲಿ ರೌಂಡ್ಸ್ ಹಾಕುತ್ತಿರುವುದು ಕಂಡುಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇತ್ತೀಚೆಗೆ ಮರಾಠಿ ಮುಖಂಡ ನಾಗೇಶ‌ ಮನ್ನೋಳ್ಕರ್‌, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿಯಾಗಿದ್ದರು.

ಇದನ್ನೂ ಓದಿ | Karnataka election | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು

ಮರಾಠ ಸಮುದಾಯದ ನಾಯಕರ ಜತೆ ನಿರಂತರ ಸಂಪರ್ಕ ಹೊಂದಿರುವ ಜಾರಕಿಹೊಳಿ, ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮರಾಠ ಸಮುದಾಯ ಮುಖಂಡನನ್ನು ಬಿಜೆಪಿ ನಾಯಕರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.

ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ‌ನಾಗೇಶ ಮನ್ನೋಳ್ಕರ್ ಪರ ರಮೇಶ್ ಒಲವು ಹೊಂದಿದ್ದು, ಮರಾಠ ಸಮುದಾಯದವರು ‌ನಾಗೇಶ ಮನ್ನೋಳ್ಕರ್‌ಗೆ ಬೆಂಬಲ ನೀಡುವ ಜತೆಗೆ ಸಮುದಾಯದಿಂದ ಮತ್ಯಾರೂ ಸ್ಪರ್ಧಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಇನ್ನು ನಾಗೇಶ‌ ಮನ್ನೋಳ್ಕರ್‌ಗೆ ಬಿಜೆಪಿ ‌ಟಿಕೆಟ್‌ ನೀಡುವಂತೆ ಬಿಜೆಪಿ ನಾಯಕರನ್ನು ಭೇಟಿಯಾದ ವೇಳೆ ರಮೇಶ್ ಜಾರಕಿಹೊಳಿ ಮನವಿ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರಿಗೆ ನಾಗೇಶ‌ ಮನ್ನೋಳ್ಕರ್‌ ಅವರನ್ನು ಭೇಟಿ ಮಾಡಿಸಿ, ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ರಮೇಶ್ ‌ಜಾರಕಿಹೊಳಿಯ ಈ ನಡೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ | ದೆಹಲಿಯತ್ತ ಹೊರಟ ಬಸವರಾಜ ಬೊಮ್ಮಾಯಿ: ಸಂಭಾವ್ಯ ಹೊಸ ಸಚಿವರ ಪಟ್ಟಿ ಸಿದ್ಧ; ಹಾಲಿ ಸಚಿವರಲ್ಲಿ ಆತಂಕ

Exit mobile version