Site icon Vistara News

Karnataka Election 2023 | ಸವದತ್ತಿ ಕ್ಷೇತ್ರದಲ್ಲಿ ಮಾಮನಿ ಕುಟುಂಬಕ್ಕೆ ಮತ್ತೊಮ್ಮೆ ಸಿಗುತ್ತಾ ಬಿಜೆಪಿ ಟಿಕೆಟ್‌?

Karnataka Election 2023

| ಅನಿಲ್ ಕಾಜಗಾರ, ಬೆಳಗಾವಿ
ಶಕ್ತಿ ದೇವತೆ ರೇಣುಕಾ ಯಲ್ಲಮ್ಮ ನೆಲೆಸಿರುವ ಪವಿತ್ರ ಕ್ಷೇತ್ರ, ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಸವದತ್ತಿ ಕ್ಷೇತ್ರದಲ್ಲೀಗ ಬಿಜೆಪಿ ನೆಲೆಯೂರಿ ನಿಂತಿದೆ. ಡೆಪ್ಯುಟಿ ಸ್ಪೀಕರ್‌ ಆಗಿದ್ದ ಆನಂದ ಮಾಮನಿ ಸವದತ್ತಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಆದರೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಇತ್ತೀಚೆಗೆ ವಿಧಿವಶರಾದ ಪರಿಣಾಮ ಸವದತ್ತಿ ಕ್ಷೇತ್ರದಲ್ಲೀಗ ರಾಜಕೀಯ ಚಟುವಟಿಕೆಗಳು (Karnataka Election 2023) ಗರಿಗೆದರಿದ್ದು, ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.

ಡೆಪ್ಯುಟಿ ಸ್ಪೀಕರ್‌ ಆಗಿದ್ದ ಆನಂದ ಮಾಮನಿ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದರು. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಅರಳಿಸಿದ ಕೀರ್ತಿ ಅವರದ್ದಾಗಿತ್ತು. ಅಲ್ಲದೇ ಈ ಕ್ಷೇತ್ರದಲ್ಲಿ ಸತತವಾಗಿ ಮೂರು ಸಲ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದವರು. ಸವದತ್ತಿ ಕ್ಷೇತ್ರದಲ್ಲಿ ಮಾಮನಿ ಕುಟುಂಬಕ್ಕೆ ದಶಕಗಳಿಂದ ರಾಜಕೀಯ ಹಿನ್ನೆಲೆ ಇದೆ. ಆನಂದ ಮಾಮನಿ ತಂದೆ ಚಂದ್ರಶೇಖರ್ ಮಾಮನಿ ಕೂಡ ಸವದತ್ತಿ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿ, ಡೆಪ್ಯುಟಿ ಸ್ಪೀಕರ್‌ ಆಗಿದ್ದರು. ತಂದೆಯಂತೆ ಆನಂದ ಮಾಮನಿ ಕೂಡ ಡೆಪ್ಯುಟಿ ಸ್ಪೀಕರ್‌ ಹುದ್ದೆ ಅಲಂಕರಿಸಿದ್ದರು. ಆದರೆ ಆನಂದ ಮಾಮನಿ ಅಕಾಲಿಕ ನಿಧನದಿಂದ ಇದೀಗ ಅವರ ಪತ್ನಿ ರತ್ನಾ ಮಾಮನಿ ಬಿಜೆಪಿ ಟಿಕೆಟ್‌ ಪಡೆಯಲು ಕಸರತ್ತು ಆರಂಭಿಸಿದ್ದಾರೆ.

ಇದನ್ನೂ ಓದಿ | CT Ravi | ಸಿದ್ರಾಮುಲ್ಲಾ ಹೇಳಿಕೆಗೆ ಕಾಂಗ್ರೆಸ್‌ ಕೆಂಡ, ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ; ತಾಕತ್ತಿದ್ದರೆ ರಸ್ತೆ ದಾಟಿ ಎಂದ ಬಿಜೆಪಿ

ಇತ್ತೀಚೆಗೆ ರಾಮದುರ್ಗಕ್ಕೆ ಬಂದಿದ್ದ ಸಿಎಂ ಬಸವರಾಜ್‌ ಬೊಮ್ಮಾಯಿ ಅವರನ್ನು ರತ್ನಾ ಮಾಮನಿ ಭೇಟಿಯಾಗಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದರು. ಸಿಎಂ ಭೇಟಿ ಬೆನ್ನಲ್ಲೇ ರತ್ನಾ ಮಾಮನಿ ಮತ್ತಷ್ಟು ಆ್ಯಕ್ಟಿವ್‌ ಆಗಿದ್ದಾರೆ. ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದೇವತೆ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರತ್ನಾ ಮಾಮನಿ, ಸಾಹುಕಾರ್‌ ಕಳೆದುಕೊಂಡ ದುಃಖ ಇನ್ನೂ ಹೋಗಿಲ್ಲ. ಮಕ್ಕಳು ಚಿಕ್ಕವರು ಇರುವ ಕಾರಣಕ್ಕೆ ನಾನೇ ಹೊರೆ ಹೊರಬೇಕಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಟಿಕೆಟ್‌ ಕೊಡುವ ನಂಬಿಕೆ ನಮಗೂ ಇದೆ. ಎಲ್ಲರೂ ಗಟ್ಟಿಯಾಗಿ ಇರೋಣ, ಯಜಮಾನರಿಗೆ ಕೊಡುತ್ತಿದ್ದ ಸಹಕಾರ ನನಗೂ ಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಆನಂದ ಮಾಮನಿ ನಿಧನದ ಕಾರಣಕ್ಕೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಆನಂದ ಮಾಮನಿ ಪತ್ನಿ ರತ್ನಾ ಮಾಮನಿ, ಆನಂದ ಮಾಮನಿ ಸೋದರ ಸಂಬಂಧಿ ಸಹ ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಮಾಮನಿ ಕುಟುಂಬಸ್ಥರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಹಲವು ಬಿಜೆಪಿ ಕಾರ್ಯಕರ್ತರಿದ್ದಾರೆ. ಈ ಕಾರಣಕ್ಕೆ ಸವದತ್ತಿ ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಿಕೊಳ್ಳಲು ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ಸೇರಿ ಹಲವರು ಕಸರತ್ತು ಆರಂಭಿಸಿದ್ದಾರೆ.

ಈ ಕುರಿತು ಮಾತನಾಡಿರುವ ರುದ್ರಣ್ಣ ಚಂದರಗಿ, ಆನಂದ ಮಾಮನಿ ಅವರ ಅಕಾಲಿಕ ನಿಧನ ಇಡೀ ಪಕ್ಷಕ್ಕೆ ಬೇಸರ ತರಿಸಿದೆ. ಬರುವ ಚುನಾವಣೆಯಲ್ಲಿ ಪಕ್ಷದ ನಾಯಕರು ಆನಂದ ಮಾಮನಿ ಪತ್ನಿ ರತ್ನಾ ಅವರಿಗೆ ಟಿಕೆಟ್‌ ನೀಡಬೇಕು. ರತ್ನಾಗೆ ಟಿಕೆಟ್‌ ಸಿಕ್ಕರೆ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ. ಈ ಹಿಂದೆ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಮಂಗಲ ಅಂಗಡಿ ಬೆನ್ನಿಗೆ ನಿಂತು ಕೆಲಸ ಮಾಡಿದ್ದೇವೆ. ಮಂಗಲ ಅಂಗಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ರತ್ನಾ ಮಾಮನಿ ಗೆಲ್ಲಿಸಲೂ ಪ್ರಯತ್ನಿಸುತ್ತೇವೆ. ಅವರ ಬದಲಿಗೆ ಪಕ್ಷ ಕಾರ್ಯಕರ್ತರನ್ನು ಗುರುತಿಸಿದರೆ ನಾನು ಕೂಡ ಸವದತ್ತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಸವದತ್ತಿ ಕ್ಷೇತ್ರದಲ್ಲಿ ಅನುಕಂಪ ಅಸ್ತ್ರ ಪ್ರಯೋಗಿಸಿ ಗೆಲ್ಲಲು ಬಿಜೆಪಿ ನಾಯಕರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲೂ ಅನುಕಂಪದ ಅಸ್ತ್ರ ಪ್ರಯೋಗಿಸಿ ಬಿಜೆಪಿ ಗೆದ್ದಿತ್ತು. ಇದೆ ತಂತ್ರವನ್ನು ಸವದತ್ತಿಯಲ್ಲೂ ಅನುಸರಿಸಲು ನಾಯಕರು ಒಲವು ತೋರಿದ್ದಾರೆ. ಇತ್ತ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲೇ ರತ್ನಾ ಮಾಮನಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಟಿಕೆಟ್‌ ಸಿಗುವುದು ಯಾರಿಗೆ? ಸವದತ್ತಿ ಮತದಾರ ಯಾರಿಗೆ ಜೈ ಎನ್ನಲಿದ್ದಾರೆ ಎಂಬುವುದೇ ಸದ್ಯದ ಕುತೂಹಲ.

ಇದನ್ನೂ ಓದಿ | Criminal Politics | ಸೋಲಿನ ಭೀತಿಗೆ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆಗೆ ಹೊರಟ ಬಿಜೆಪಿ: ಸಿದ್ದರಾಮಯ್ಯ

Exit mobile version