Site icon Vistara News

Karnataka Politics : ಸಿಬಿಐಗೆ ಸಿಡಿ ಕೇಸ್‌ ಕೊಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆದ ರಮೇಶ್‌ ಜಾರಕಿಹೊಳಿ

CM Siddaramaiah DCM DK Shivakumar and Ramesh Jarkiholi

ಬೆಳಗಾವಿ: ನನ್ನ ಸಿಡಿ ಕೇಸ್ ಅನ್ನು ಸಿಬಿಐಗೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದಿದ್ದೇನೆ. ಜತೆಗೆ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಗೂ ಸಹ ಪತ್ರ ಬರೆದಿದ್ದೇನೆ. ಇನ್ನು ಈ ಸಿ.ಡಿ. ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಪಾತ್ರ ಇದೆ. ಅವರ ಪಾತ್ರ ಇಲ್ಲವೆಂದು ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Former Minister Ramesh Jarkiholi), ಈ ತನಿಖೆಯನ್ನು ಸರ್ಕಾರ ಸಿಬಿಐಗೆ ಕೊಟ್ಟರೆ ಸರಿ, ಇಲ್ಲವಾದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೂ ಹೋಗುತ್ತೇನೆ. ಈ ಷಡ್ಯಂತ್ರದ ಹಿಂದೆ ಪ್ರಭಾವಿ ನಾಯಕನ ಕೈವಾಡ ಇದೆ ಎಂದು ನಾನು ಪತ್ರ ಬರೆದಿದ್ದೇನೆ ಎಂದು ಹೇಳಿದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics ) ಮತ್ತೆ ಸಿಡಿ ಚರ್ಚೆ ಮುನ್ನೆಲೆಗೆ ಬಂದಿದೆ.

ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಎಂಗೆ ಬರೆದ ಪತ್ರವನ್ನು ಮಾಧ್ಯಮಗಳ ಮುಂದೆ ತೋರಿಸಿದರು. ಆ ಸಿಡಿಯಲ್ಲಿ ಡಿಕೆಶಿ ಪಾತ್ರ ಇಲ್ಲವೆಂದಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಮೇಶ್‌ನನ್ನು ಹೇಗೆ ಸಿಕ್ಕಿಸಿದೆ ಎಂದು ಮಾತನಾಡಿರುವ ಆಡಿಯೊ ಸಾಕ್ಷಿ ನನ್ನ ಬಳಿ ಇದೆ ಎಂದು ಹೇಳಿದರು.

ಇದನ್ನೂ ಓದಿ: Karnataka Politics : ನನ್ನ ಅಧಿಕಾರದ ಬಗ್ಗೆ ಚಿಂತಿಸಬೇಡಿ; ಪಕ್ಷಕ್ಕಾಗಿ ಕೆಲಸ ಮಾಡೋಣ: ಡಿ.ಕೆ. ಶಿವಕುಮಾರ್

ನಾವು ಆಪರೇಷನ್ ಮಾಡುತ್ತಿಲ್ಲ‌, ಮಾಡಲು ಸಾಧ್ಯವಾಗುವುದಿಲ್ಲ. ಈಗ ಆಪರೇಷನ್ ಮಾಡುವುದಿದ್ದರೆ ಡಿ.ಕೆ. ಶಿವಕುಮಾರ್ ಮಾಡಬೇಕು ಇಲ್ಲವೇ ಸಿಎಂ ಸಿದ್ದರಾಮಯ್ಯ ಮಾಡಬೇಕು. ಅವರವರ ಮಧ್ಯೆಯೇ ಒಡಕಾಗಿ ಸರ್ಕಾರ ಬೀಳಬೇಕು. ಈಗಿನ ಆಪರೇಷನ್‌ನಲ್ಲಿ ನಮ್ಮ ಕೈವಾಡ ಇಲ್ಲ. ಮುಂದೆಯೂ ಇರುವುದಿಲ್ಲ. ನೂರು ದೂರು ಕೊಟ್ಟರೂ ರಮೇಶ ಜಾರಕಿಹೊಳಿ ಹೆದರುವುದಿಲ್ಲ. ನನ್ನಂತೆಯೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯೂ ಹೆದರುವುದಿಲ್ಲ ಎಂದು ರಮೇಶ್‌ ಜಾರಕಿಹೊಳಿ ಹೇಳಿದರು.

ಖರ್ಗೆ ಕಾಲಿಗೆ ಮಾತ್ರ ಬಿದ್ದಿದ್ದೇನೆ

ನನ್ನ ಜೀವನದಲ್ಲಿ ಕಾಲಿಗೆ ಬಿದ್ದಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆ ಮಾತ್ರ. ಅದನ್ನು ಬಿಟ್ಟರೆ ಯಾರ ಕಾಲಿಗೂ ಸಹ ಬಿದ್ದಿಲ್ಲ. ಡಿ.ಕೆ. ಶಿವಕುಮಾರ ಅವರ ಕಾಲಿಗೆ ನಾನು ಬಿದ್ದಿದ್ದೇನೆ ಎಂದು ಸಾಬೀತು ಮಾಡಿದರೆ ನಾನು ಸಾರ್ವಜನಿಕವಾಗಿ ರುಂಡ ಕಡಿದುಕೊಳ್ಳುತ್ತೇನೆ. ನರಸಿಂಹ ಮೂರ್ತಿ ಎನ್ನುವ ವ್ಯಕ್ತಿಯದ್ದು ಸಹ ಸಿಡಿ ಕೇಸ್‌ನಲ್ಲಿ ಪಾತ್ರ ಇದೆ ಎಂದು ರಮೇಶ್‌ ಜಾರಕಿಹೊಳಿ ದೂರಿದರು.

ನಿಮ್ಮ ಸರ್ಕಾರ ಇದ್ದಾಗಲೇ ಸಿಡಿ ಕೇಸ್ ಸಿಬಿಐಗೆ ಕೊಡಬಹುದಿತ್ತಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ ಜಾರಕಿಹೊಳಿ, ಅಲ್ಲಿಯೇ ಕ್ಲೈಮ್ಯಾಕ್ಸ್ ಇದೆ ಎಂದಷ್ಟೇ ಉತ್ತರಿಸಿದರು. ಈ ಪ್ರಕರಣದಲ್ಲಿ ನಿಮ್ಮ ಪಕ್ಷದವರದ್ದು ಕೈವಾಡ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ನಾನು ಹೇಳಲು ಬರುವುದಿಲ್ಲ ಎಂದು ಹೇಳಿದರು.

ಟಿವಿ ಕೇಬಲ್‌ಗಳನ್ನು ಸಹ ಡಿ.ಕೆ. ಶಿವಕುಮಾರ್ ಕಂಟ್ರೋಲ್ ಮಾಡುತ್ತಾನೆ. ಟಿವಿಯನ್ನೂ ಸಹ ಕಂಟ್ರೋಲ್ ಮಾಡುತ್ತಾನೆ ಎಂದು ಏಕವಚನದಲ್ಲಿಯೇ ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಸಿಬಿಐಗೆ ಕೊಡದಿದ್ದರೆ ಕೋರ್ಟ್‌ಗೆ ಹೋಗುವೆ

ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸದೇ ಇದ್ದರೆ, ನಾನು ಕೋರ್ಟ್ ಮೂಲಕ ಹೋರಾಟ ಮಾಡುತ್ತೇನೆ. ನಾನು ಕೊಟ್ಟಿದ್ದ ಅರ್ಜಿಯ ಮೇಲೆಯೇ ಎಸ್‌ಐಟಿ ರಚನೆ ಆಗಿದೆ. ನಾನು ದೂರು ಕೊಟ್ಟಿರಲಿಲ್ಲ .ಅರ್ಜಿ ಕೊಟ್ಟಿದ್ದೆ. ಆಗ ಎರಡೂ ಕಡೆ ಎಫ್ಐಆರ್ ಆಗಿಲ್ಲ. ಡಿ ಕೆ ಶಿವಕುಮಾರ್ ಬ್ಲ್ಯಾಕ್‌ಮೇಲ್ ಸೋನಿಯಾ ಗಾಂಧಿ ಅವರ ವರೆಗೂ ಇದೆ. ಅವರನ್ನು ಹೆದರಿಸಿ ಈತ ಅಧ್ಯಕ್ಷನಾಗಿದ್ದಾನೆ ಎಂದು ರಮೇಶ್‌ ಜಾರಕಿಹೊಳಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಸರ್ಕಾರ ವಿಸರ್ಜನೆಗೆ ಕೇಂದ್ರಕ್ಕೆ ಮನವಿ ಮಾಡುವೆ

ಡಿ.ಕೆ. ಶಿವಕುಮಾರ್ ಜೇಬಲ್ಲಿ ಒಂದು ಹಾಳೆ ಇರುತ್ತದೆ. ಅದರಲ್ಲಿ ಒಂದು ಕೋಡ್ ನಂಬರ್ ಇರುತ್ತದೆ. ಇದು ಹೀಗೆಯೇ ಮುಂದುವರಿದರೆ ಸರ್ಕಾರವನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಿರೋಧ ಪಕ್ಷದ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಹೀಗೆಯೇ ಮುಂದುವರಿದರೆ ನಾಳೆ ನಮ್ಮನ್ನೇ ಕೊಂದು ಹಾಕಿದರೆ ಏನು ಗತಿ? ಎಂದು ರಮೇಶ್‌ ಜಾರಕಿಹೊಳಿ ಪ್ರಶ್ನೆ ಮಾಡಿದರು.

ನನ್ನನ್ನು ಟೆರರಿಸ್ಟ್‌ ಎಂದು ಬಿಂಬಿಸಲು ಯತ್ನ

ದುಬೈನಿಂದ, ಯುಎಇಯಿಂದ ಕೆರೆಗಳು ಬರುತ್ತವೆ. ಅವರೊಂದಿಗೆ ಮಾತಾಡಿದ್ದನ್ನು ಹ್ಯಾಕ್ ಮಾಡಿ ನನಗೆ ಭಯೋತ್ಪಾದಕರೊಂದಿಗೆ ಲಿಂಕ್ ಇದೆ ಎಂದು ಬಿಂಬಿಸುವೆ ಕೆಲಸಕ್ಕೂ ಡಿ.ಕೆ. ಶಿವಕುಮಾರ್ ಮುಂದಾಗಿದ್ದ. ಡಿಕೆಶಿ ಅಂತ್ಯವಾದರೆ ಅದು ರಾಜ್ಯಕ್ಕೆ ಒಳ್ಳೆಯದು. ಕಿತ್ತೂರು ಚನ್ನಮ್ಮನನ್ನು ಬೈದಿದ್ದೆನೆ ಎಂಬ ಆಡಿಯೊ ಡಿಕೆಶಿ ಬಳಿ ಇದೆ. ಕಟ್ ಪೇಸ್ಟ್ ಮಾಡಿದ ಆಡಿಯೊವನ್ನು ಇಟ್ಟುಕೊಳ್ಳಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಬನ್ನಿ ಎಂದರೆ ಆಫರ್‌ ಕೊಟ್ಟಂತಾ?

ಬೆಳಗಾವಿ ಎರ್ಪೋರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ನೀವು ಆಫರ್ ಮಾಡಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ ಜಾರಕಿಹೊಳಿ, ನಾನು ಆಫರ್ ಮಾಡಿಲ್ಲ. ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಹಾಗಾದ್ರೆ ನಮ್ಮ ಕಡೆ ಬನ್ನಿ ಎಂದೆ ಅದು ಆಫರಾ? ಎಂದು ಪ್ರಶ್ನೆ ಮಾಡಿದರು.

Exit mobile version