Site icon Vistara News

Karnataka Rajyotsava : ಕರಾಳ ದಿನ ಆಚರಿಸಿ ಉದ್ಧಟತನ ಮೆರೆದ ಎಂಇಎಸ್‌; ಕೈಕಟ್ಟಿ ಕುಳಿತ ಜಿಲ್ಲಾಡಳಿತ

MES Protest at Belagavi

ಬೆಳಗಾವಿ: ಕರ್ನಾಟಕದಲ್ಲಿದ್ದು ಇಲ್ಲಿನ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಜೀವನ ಸಾಗಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (Maharashtra Ekikaran Samiti – ಎಂಇಎಸ್‌) ಪುಂಡಾಟಿಕೆ ಮಿತಿಮೀರಿದೆ. ಕನ್ನಡ ರಾಜ್ಯೋತ್ಸವ ದಿನದಂದು (Karnataka Rajyotsava) ಕರಾಳ ದಿನ ಆಚರಣೆಗೆ (Black Day celebrations) ಅನುಮತಿ ನೀಡದಿದ್ದರೂ ಪ್ರತಿಭಟನಾ ರ‍್ಯಾಲಿ ಮಾಡಿರುವ ನಾಡದ್ರೋಹಿಗಳು ನಿಪ್ಪಾಣಿ, ಕಾರವಾರ, ಬೆಳಗಾವಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಒಂದು ಕಡೆ ಅದ್ಧೂರಿ ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮ ನಡೆದರೆ, ಇನ್ನೊಂದು ಕಡೆ ಎಂಇಎಸ್ ಪುಂಡರು ಕರಾಳ ದಿನವನ್ನು ಆಚರಿಸಿದ್ದಾರೆ. ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ಮಾಡಲಾಗಿದೆ.

ನಿಷೇಧದ ಮಧ್ಯೆಯೂ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮೆರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಕಪ್ಪು ಬಣ್ಣದ ಉಡುಪು ತೊಟ್ಟಿದ್ದರೆ, ಮತ್ತೆ ಕೆಲವರು ಕಪ್ಪು ಪಟ್ಟಿಯನ್ನು ಧರಿಸಿದ್ದರು. ಬೆಳಗಾವಿಯ ಸುಭಾಷ್ ನಗರದ ಆಟದ ಮೈದಾನದಿಂದ ಮೆರವಣಿಗೆಯನ್ನು ಪ್ರಾರಂಭಿಸಲಾಗಿತ್ತು. ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಮೆರವಣಿಗೆ ಮಾಡಲಾಗಿದೆ.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಎಂಇಎಸ್ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ. ಅಲ್ಲಿಂದ ಮೆರವಣಿಗೆ ಮೂಲಕ ಬೆಳಗಾವಿಯ ಮರಾಠ ಮಂದಿರಕ್ಕೆ ಬಂದು ಸಭೆ ನಡೆಸಿದ್ದಾರೆ. ನಿಪ್ಪಾಣಿ, ಕಾರವಾರ, ಬೆಳಗಾವಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಸಭೆಯಲ್ಲಿಯೂ ಚರ್ಚೆ ನಡೆಸಿದ್ದಾರೆ.

ಪೊಲೀಸರಿಂದ ಏಕೆ ಕ್ರಮವಿಲ್ಲ?

ಯಾವುದೇ ಕಾರಣಕ್ಕೂ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನವನ್ನು ಆಚರಿಸಲು ಬಿಡುವುದಿಲ್ಲ ಎಂದು ಹಲವು ಸಚಿವರಿಂದ ಹಿಡಿದು ಜಿಲ್ಲಾಧಿಕಾರಿ ಸಹ ಗುಡುಗಿದ್ದರು. ಆದರೆ, ಬುಧವಾರ (ನ. 1) ಎಂಇಎಸ್‌ ಪುಂಡರು ಯಾವುದೇ ಅಡೆತಡೆ ಇಲ್ಲದೆ ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ಪೊಲೀಸರು ಏಕೆ ಕ್ರಮಗಳನ್ನು ಕೈಗೊಂಡಿಲ್ಲ? ಎಂಇಎಸ್‌ ಪುಂಡರನ್ನು ಬಂಧಿಸಬೇಕಿತ್ತ ಎಂಬ ಆಗ್ರಹಗಳು ಕೇಳಿ ಬಂದಿವೆ.

ರಾಜ್ಯ ಬಿಟ್ಟು ತೊಲಗಿ ಎಂದು ಗುಡುಗಿದ್ದ ಸಚಿವ ಶಿವರಾಜ್‌ ತಂಗಡಗಿ

ಕನ್ನಡ ರಾಜ್ಯೋತ್ಸವ ಸಂಬಂಧ ಎಂಇಎಸ್ ಏನಾದರೂ ಪುಂಡಾಟಿಕೆ ನಡೆಸಿದರೆ ಸರ್ಕಾರದಿಂದ ಕ್ರಮ ಗ್ಯಾರಂಟಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Kannada and Culture Minister Shivaraj Thangadagi) ಗುಡುಗಿದ್ದರು. ಬುಧವಾರ ಸರ್ಕಾರದಿಂದ ನಡೆಯುವ ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆಗೆ ತೊಂದರೆ ಕೊಟ್ಟರೆ ಕ್ರಮ ತೆಗೆದುಕೊಳ್ಳಲಾಗುವುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದ್ದರು.

ಎಂಪಿಎಸ್ ಏನಾದರೂ ಪುಂಡಾಟಿಕೆ ನಡೆಸಿದರೆ, ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತದೆ. ಬೆಳಗಾವಿಯಲ್ಲಿರುವ ಮರಾಠಿಗರನ್ನು ನಾವು, ಪ್ರೀತಿ ವಿಶ್ವಾಸದಿಂದ ಗೌರವಿಸುತ್ತೇವೆ. ಆದರೆ, ನೀವು ನಮ್ಮ ಕನ್ನಡ ಭಾಷೆಯನ್ನು ಗೌರವಿಸಿಲ್ಲವೆಂದಾದರೆ ರಾಜ್ಯದಲ್ಲಿ ಇರಬೇಡಿ, ರಾಜ್ಯ ಬಿಟ್ಟು ತೊಲಗಿ ಎಂದು ಶಿವರಾಜ್‌ ತಂಗಡಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: CM Siddaramaiah : ಮೋದಿ ಸರ್ಕಾರದಿಂದ ಕರ್ನಾಟಕದ ವಿರುದ್ಧ ನಿರಂತರ ದ್ವೇಷ; ಶೇಖಾವತ್‌ಗೆ ಸಿದ್ದರಾಮಯ್ಯ ತಿರುಗೇಟು

ನವೆಂಬರ್‌ 1ನೇ ತಾರೀಖಿನಂದೇ ಏಕೆ ನಿಮಗೆ ಕರಾಳ ದಿನಚಾರಣೆ ಮಾಡಬೇಕು? ನಾನು ಸರಳ ಭಾಷೆಯಲ್ಲಿ ಹೇಳುತ್ತೇನೆ. ನಮ್ಮ ನೆಲ – ಜಲದಲ್ಲಿ ವಾಸವಾಗಿ ಈ ರೀತಿ ಮಾಡುವುದು ಸರಿಯಲ್ಲ. ಇದನ್ನೇ ಮುಂದುವರಿಸಿದರೆ ಸುಮ್ಮನಿರಲ್ಲ, ಸರ್ಕಾರ ಖಂಡಿತವಾಗಿಯೂ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ, ನೀವುಗಳು ಎಲ್ಲಿ ಇರುತ್ತೀರೋ ಅಲ್ಲಿಯ ಭಾಷೆಯನ್ನು ಗೌರವಿಸುವ ಕೆಲಸ ಮಾಡಿ ಎಂದು ಸಚಿವ ಶಿವರಾಜ ತಂಗಡಗಿ ಬುದ್ಧಿವಾದವನ್ನು ಹೇಳಿದ್ದರು.

Exit mobile version