ಬೆಂಗಳೂರು: ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಮುಂದಾಗಿವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳನ್ನು ನಿರ್ಧಾರ ಮಾಡಲಾಗಿದ್ದು, ಅನೇಕ ವಿಚಾರಗಳಲ್ಲಿ ಚರ್ಚೆ, ವಾಗ್ವಾದ ಆಗುವುದು ನಿಶ್ಚಿತ.
ಕಾಂಗ್ರೆಸ್ ನಾಯಕರು ಸದನದಲ್ಲಿ ಪ್ರಸ್ತಾಪಿಸಬೇಕಿರುವ 12 ಅಂಶಗಳು ಹಾಗೂ ಅದಕ್ಕೆ ಪೂರಕ ದಾಖಲೆಗಳನ್ನೂ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೀಡಿದ್ದಾರೆ.
12 ಅಂಶಗಳನ್ನು ಬರೆಯುವ ಮುನ್ನ ಪ್ರಸ್ತಾವನೆ ಮಾಡಿರುವ ಸುರ್ಜೆವಾಲ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ನಂಬಿಕೆಯನ್ನು ಕಳೆದುಕೊಂಡಿದೆ. ಮಿತಿಮೀರಿದ ಭ್ರಷ್ಟಾಚಾರ, ರಾಜ್ಯದ ಸಂಪನ್ಮೂಲಗಳ ಲೂಟಿ, ರೈತರ ಶೋಷಣೆ, ಎಸ್‌ಸಿಎಸ್‌ಟಿ ಸಮುದಾಯದವರ ಮೇಲೆ ಹೆಚ್ಚಿದ ದೌರ್ಜನ್ಯ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಮೂಲಸೌಕರ್ಯ ಕುಸಿತ, ಪ್ರಾದೇಶಿಕ ಅಸಮಾನತೆಗಳು ಮಿತಿಮೀರಿವೆ.
ರಾಝ್ಯದ ಜನರನ್ನು ಬಾಧಿಸುತ್ತಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ಮಾಡಬೇಕಿದೆ. ಸದನದಲ್ಲಿ ಸರ್ಕಾರದ ಮುಖವಾಡವನ್ನು ಬಯಲು ಮಾಡಬೇಕಿದೆ ಎಂದಿದ್ದಾರೆ.
ಸುರ್ಜೆವಾಲ ಸೂಚಿಸಿದ 12 ಅಂಶಗಳು
- ವೋಟರ್ ಐಡಿ ಹಗರಣ, ಅದರಲ್ಲಿ ಬಿಜೆಪಿ ನಾಯಕರ ಕೈವಾಡ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ
- ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ನಿರಂತರ ಬಿಜೆಪಿ ಸರ್ಕಾರಗಳ ವೈಫಲ್ಯ
- ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತ ಹಾಗೂ ಬಿಜೆಪಿ ಸರ್ಕಾರಗಳ ವೈಫಲ್ಯ
- ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ನೌಕರಿ ಹಾಗೂ ಶಿಕ್ಷಣದಲ್ಲಿ ಪ್ರಾತಿನಿಧ್ಯದ ಕೊರತೆ
- ದನಕರುಗಳಿಗೆ ಅಂಟಿಕೊಂಡಿರುವ ಚರ್ಮಗಂಟು ರೋಗ, ಗೋಶಾಲೆಗಳ ಸಮಸ್ಯೆ, ಹಾಲಿನ ಉತ್ಪಾದನೆಯಲ್ಲಿ ಕುಸಿತ, ಮೇವು ಅಲಭ್ಯತೆ ಸೇರಿ ಮುಂತಾದ ವಿಚಾರಗಳನ್ನು ಪರಿಹರಿಸಲು ಬಿಜೆಪಿ ವೈಫಲ್ಯ
- ಬಿಜೆಪಿ ಅಧಿಕಾರಾವಧಿಯಲ್ಲಿ ಎಸ್‌ಸಿಎಸ್‌ಟಿ ಸಮುದಾಯದ ಮೇಲೆ ಹೆಚ್ಚಿದ ದೌರ್ಜನ್ಯ
- ಬಿಜೆಪಿ ಸರ್ಕಾರದಲ್ಲಿ 40% ಭ್ರಷ್ಟಾಚಾರ
- ನೀರಾವರಿ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲ
- ಬಿಜೆಪಿ ಆಡಳಿತದಲ್ಲಿ ಶೈಕ್ಷಣಿಕ ಮೂಲಸೌಕರ್ಯ ಕುಸಿತ ಹಾಗೂ ಮಕ್ಕಳ ಮನಸ್ಸನ್ನು ಕೆಡಿಸುವ ಪ್ರಯತ್ನ
- ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಗಳ ಪಾವಿತ್ರ್ಯತೆ ಹಾಗೂ ಪ್ರಸ್ತುತತೆ- ಮಾತು ತಪ್ಪಿದ ಬಿಜೆಪಿ ಹಾಗೂ ನುಡಿದಂತೆ ನಡೆದ ಕಾಂಗ್ರೆಸ್
- ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲ
- ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸರ್ಕಾರ ವಿಫಲವಾಗಿರುವುದು
ಸುರ್ಜೆವಾಲ ನೀಡಿರುವ ಮಾರ್ಗದರ್ಶನವನ್ನು ಕಾಂಗ್ರೆಸಿಗರು ಈಗಾಗಲೆ ಪಾಲನೆ ಮಾಡುತ್ತಿದ್ದಾರೆ. ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರವನ್ನು ಚರ್ಚೆ ನಡೆಸಲು ಅವಕಾಶ ನೀಡುವಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಇಂದಿನಿಂದ ರಂಗೇರಲಿದೆ ಕಲಾಪ, ನಿಲುವಳಿ ಸೂಚನೆಗೆ ಕಾಂಗ್ರೆಸ್ ಸಿದ್ಧತೆ