ಬೆಳಗಾವಿ: ಚುನಾವಣೆ ಹೊಸ್ತಿಲಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನಾಡದ್ರೋಹಿ ಎಂಇಎಸ್ ಹೆಣಗಾಡುತ್ತಿದ್ದು, ಚಳಿಗಾಲ ಅಧಿವೇಶನದ ವೇಳೆ ಮಹಾ ಮೇಳಾವ್ (ಮರಾಠಾ ಸಮ್ಮೇಳನ-Maha Melava) ಆಯೋಜಿಸಲು ನಿರ್ಧರಿಸಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಡಿ.19 ರಂದು ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಸಲು ಎಂಇಎಸ್ ಸಿದ್ಧತೆ ನಡೆಸಿದೆ.
ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಡಿ.19ರಂದು ಮಹಾ ಮೇಳಾವ್ ನಡೆಸಲು ಎಂಇಎಸ್ ನಿರ್ಧರಸಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಕಸರತ್ತು ನಡೆಸುತ್ತಿರುವ ಎಂಇಎಸ್, ಮಹಾ ಮೇಳಾವ್ ನಡೆಸಲು ಅನುಮತಿ ಕೋರಿ ಎಂಇಎಸ್ ಮುಖಂಡರು, ಬೆಳಗಾವಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್, ಸಂಪೂರ್ಣ ನೆಲಕಚ್ಚಿದ್ದರೂ ಬುದ್ಧಿ ಕಲಿತಿಲ್ಲ. ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕುತಂತ್ರದ ಮೂಲಕ ರಾಜಕೀಯ ಲಾಭ ಪಡೆಯಲು ಎಂಇಎಸ್ ಹುನ್ನಾರ ನಡೆಸುತ್ತಿದೆ.
ಇದನ್ನೂ ಓದಿ | Kannada University | 31ನೇ ನುಡಿಹಬ್ಬ, ಘಟಿಕೋತ್ಸವ; ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಿಂದ ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ಉಂಟಾಗಿದೆ. ಈ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಎಂಇಎಸ್ ಮುಂದಾಗಿದೆ. ಮಹಾ ಮೇಳಾವ್‌ನಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ ನಾಯಕರಿಗೆ ಎಂಇಎಸ್ ಆಹ್ವಾನ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿ ಹಲವು ನಾಯಕರಿಗೆ ಎಂಇಎಸ್ ಆಹ್ವಾನ ನೀಡಿದೆ. ಬಿಜೆಪಿ, ಕಾಂಗ್ರೆಸ್, ಏಕನಾಥ ಶಿಂಧೆ ಬಣ, ಶಿವಸೇನೆ, ಎನ್‌ಸಿಪಿಗೆ ಎಂಇಎಸ್ ಪತ್ರ ಬರೆದಿದ್ದು, ಒಂದು ಪಕ್ಷದಿಂದ ತಲಾ ಇಬ್ಬರು ನಾಯಕರನ್ನು ಮಹಾ ಮೇಳಾವ್‌ಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.
ಕಳೆದ ವರ್ಷ ಸರಳವಾಗಿ ಮಹಾ ಮೇಳಾವ್ ಆಯೋಜಿಸಲಾಗಿತ್ತು. ಆದರೆ ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿಯಾಗಿ ಮಹಾ ಮೇಳಾವ್ ನಡೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಬೆಳಗಾವಿಯಲ್ಲಿ ಭಾಷಾದ್ವೇಷದ ಕಿಡಿ ಹಚ್ಚಲು ಹುನ್ನಾರ ನಡೆಲಾಗುತ್ತಿದೆ. ಹೀಗಾಗಿ ಮಹಾ ಮೇಳಾವ್‌ಗೆ ಅನುಮತಿ ನೀಡಬಾರದು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ | Janardana Reddy | ಬೇನಾಮಿ ಆಸ್ತಿ ಸಂಪಾದನೆ: ಜನಾರ್ದನ ರೆಡ್ಡಿ ವಿರುದ್ಧ ನಾಲ್ಕು ಪ್ರಕರಣಗಳು ಮುಕ್ತಾಯ