ಬೆಳಗಾವಿ: ಕನ್ನಡ ರಾಜ್ಯೋತ್ಸವದಂದು ʻಕರಾಳ ದಿನ’ ಆಚರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಂದಾಗಿದೆ. ನಾಡದ್ರೋಹಿ ಎಂಇಎಸ್‌ಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಬೆಂಬಲ ನೀಡಿದೆ.
ನವೆಂಬರ್ 1ರಂದು ಮಹಾರಾಷ್ಟ್ರದ ಶಿವಸೇನೆಯ ಕೆಲವು ಪುಂಡರು ಬೆಳಗಾವಿಗೆ ಬರಲಿದ್ದಾರೆ ಎಂದು ಗೊತ್ತಾಗಿದೆ. ನಿನ್ನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಸಭೆ ಸೇರಿದ್ದು, ಸಭೆ ಬಳಿಕ ಕನ್ನಡವಿರೋಧಿ ಘೋಷಣೆ ಕೂಗಿದರು. ಬೆಳಗಾವಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ
ನವೆಂಬರ್ 1ರಂದು ನಡೆಯುವ ಎಂಇಎಸ್ ಕರಾಳ ದಿನಾಚರಣೆಗೆ ಬೆಂಬಲ ಸೂಚಿಸಲು ಅಕ್ಟೋಬರ್ 31ರಂದು ಶಿವಸೇನೆಯ ಎಲ್ಲಾ ಪದಾಧಿಕಾರಿಗಳು ಸೇರುತ್ತೇವೆ. ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ ಸಮಾಧಿ ಸ್ಥಳದಲ್ಲಿ ಸೇರಿ ಕೊಲ್ಲಾಪುರ – ಕಾಗಲ್ – ನಿಪ್ಪಾಣಿ – ಸಂಕೇಶ್ವರ ಮಾರ್ಗವಾಗಿ ಬೆಳಗಾವಿಗೆ ಹೋಗುತ್ತೇವೆ. ಅಕ್ಟೋಬರ್ 31ರಂದು ಬೆಳಗಾವಿ ಎಂಇಎಸ್ ಮುಖಂಡರು ಕೊಲ್ಲಾಪುರಕ್ಕೆ ಬರುತ್ತಾರೆ. ಎಂಇಎಸ್, ಶಿವಸೇನೆ ಕಾರ್ಯಕರ್ತರು ಕೈಯಲ್ಲಿ ಭಗವಾಧ್ವಜ, ಮಶಾಲ್ ಹಿಡಿದು ಬೆಳಗಾವಿಗೆ ಹೋಗುತ್ತೇವೆ. ಅಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡುತ್ತೇವೆ. ನವೆಂಬರ್ 1ರಂದು ಕರಾಳ ದಿನದಲ್ಲಿ ಎಲ್ಲರೂ ಭಾಗಿಯಾಗಲಿದ್ದೇವೆ. ಕಾಗಲ್ ಚೆಕ್‌ಪೋಸ್ಟ್‌ನಲ್ಲಿ ತಡೆದರೆ ಶಿನೋಳಿ ಮಾರ್ಗವಾಗಿ ಬೆಳಗಾವಿಗೆ ಹೋಗಲಿದ್ದೇವೆ ಎಂದು ಕೊಲ್ಲಾಪುರದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಸಿಎಂಗೆ ಶಿವಸೇನೆ ಠಾಕ್ರೆ ಬಣ ಧಮಕಿ, ಕರ್ನಾಟಕ ಭವನಕ್ಕೆ ಆಕ್ಷೇಪ