ಬೆಳಗಾವಿ: ಕರ್ನಾಟಕದ ಜನರು ತೋರಿರುವ ಈ ಪ್ರೀತಿ, ವಿಶ್ವಾಸದ ಋಣವನ್ನು ಅಭಿವೃದ್ಧಿಯ ಮೂಲಕ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದಕ್ಕಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಬೆಳಗಾವಿಯಲ್ಲಿ ಕರೆ ನೀಡಿದ್ದಾರೆ.
ರೈಲ್ವೆ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ಹಾಗೂ ಪಿಎಂ ಕಿಸಾನ್ ಯೋಜನೆಯ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಬ್ಬಿನ ಬೆಳೆಗಾರರ ಹಿತವನ್ನು ನಾವು ಆದ್ಯತೆಯಾಗಿಸಿದ್ದೇವೆ. ಈ ಬಾರಿಯೂ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ನೀಡಿದ್ದೇವೆ. 2016-17ಕ್ಕಿಂತ ಹಿಂದಿನ ಪಾವತಿ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಸಕ್ಕರೆ ಸಹಕಾರಿ ಸಂಸ್ಥೆಗಳಿಗೆ 10 ಸಾವಿರ ಕೋಟಿ ರೂ. ಹೊರೆ ತಗ್ಗಿದೆ. ಯುಪಿಎ ಸರ್ಕಾರ ಹೊರಿಸಿದ್ದ ಹೊರೆ ಇದರಿಂದಾಗಿ ಇಳಿದಿದೆ. ಎಥೆನಾಲ್ ಉತ್ಪಾದನೆಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಕಬ್ಬು ಬೆಳೆಗಾರರ ಆದಾಯ ಹೆಚ್ಚುತ್ತಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಬ್ಲೆಂಡಿಂಗ್ ಹೆಚ್ಚಿಸುತ್ತಿದೆ. ಈಗ 20% ಮಿಶ್ರಣದ ಗುರಿಯನ್ನು ಹೊಂದಿದೆ ಎಂದರು.
ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಉತ್ತಮ ಸಂಪರ್ಕ ವ್ಯವಸ್ಥೆಯಿಂದ ಸದೃಢವಾಗುತ್ತವೆ. ಕರ್ನಾಟಕದ ಸಂಪರ್ಕದ ಮೇಲೆ ಗಮನ ನೀಡಿದ್ದೇವೆ. ಕರ್ನಾಟಕದ ರೈಲ್ವೆ ಬಜೆಟ್ ಈ ಹಿಂದೆ 4 ಸಾವಿರ ಕೋಟಿ ರೂ. ಇತ್ತು. ಈ ವರ್ಷ ರೈಲ್ವೆಗಾಗಿ 7.5 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ. ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳು ಜಾರಿಯಲ್ಲಿವೆ. ಇದರಿಂದ ಅನೇಕರಿಗೆ ನೌಕರಿ ಸಿಕ್ಕಿದೆ. ಬೆಳಗಾವಿಯ ಆಧೂನಿಕ ರೈಲ್ವೆ ನಿಲ್ದಾಣ ನೋಡಿ ಆಶ್ಚರ್ಯ ಹಾಗೂ ಹೆಮ್ಮೆಯೆನಿಸುತ್ತದೆ. ಇಂತಹ ಸ್ಟೇಷನ್‌ಗಳನ್ನು ವಿದೇಶದಲ್ಲಿ ಮಾತ್ರವೇ ನೋಡಲು ಸಿಗುತ್ತಿತ್ತು ಎಂದು ಹೇಳಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು, ವೇಗದ ಅಭಿವೃದ್ಧಿಗೆ ಗ್ಯಾರಂಟಿ. ಇದಕ್ಕೆ ಉದಾಹರಣೆಯು ಜಲಜೀವನ ಮಿಷನ್‌ನಲ್ಲಿ ಸಿಗುತ್ತದೆ. ಈ ಹಿಂದೆ ಕರ್ನಾಟಕದ ಕೇವಲ 25% ಕುಟುಂಬಗಳ ಬಳಿ ಮಾತ್ರವೇ ನಲ್ಲಿಯ ನೀರು ಲಭಿಸುತ್ತಿತ್ತು. ಇಂದು ಡಬಲ್ ಇಂಜಿನ್ ಸರ್ಕಾರದ ಕಾರಣಕ್ಕೆ 60% ಕ್ಕಿಂತ ಹೆಚ್ಚು ಆಗಿದೆ. ಬೆಳಗಾವಿಯಲ್ಲಿ 2 ಲಕ್ಷ ಕುಟುಂಬಗಳಿಗಿದ್ದ ಸಂಪರ್ಕ ಈಗ 4 ಲಕ್ಷದಷ್ಟಾಗಿದೆ ಎಂದರು.
ಇದನ್ನೂ ಓದಿ: ಸಿಸೋಡಿಯಾ ಸಿಬಿಐ ವಿಚಾರಣೆ ವಿರೋಧಿಸಿ, ಮೋದಿ ಮರ್ ಗಯಾ ಎಂದ ಆಪ್ ಕಾರ್ಯಕರ್ತರು; ನನ್ನ ಪತ್ನಿಯ ಕಾಳಜಿ ಮಾಡಿ ಎಂದ ದೆಹಲಿ ಡಿಸಿಎಂ
ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರ ಹೇಲಿಕೆಯನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್‌ನವರು ಎಷ್ಟು ನಿರಾಶರಾಗಿದ್ದಾರೆ ಎಂದರೆ, ಮೋದಿ ಜೀವಂತ ಇರುವವರೆಗೂ ಅವರ ಆಸೆ ಈಡೇರುವುದಿಲ್ಲ ಎಂದು ತಿಳಿದಿದ್ದಾರೆ. ಅದಕ್ಕಾಗಿಯೇ ಮರ್ ಜಾ ಮೋದಿ (ಮೋದಿ ನಿಧನವಾಗು) ಎಂದು ಘೋಷಣೆ ಕೂಗುತ್ತಿದ್ದಾರೆ. ಮೋದಿ ನಿನ್ನ ಸಮಾಧಿಯಾಗುತ್ತದೆ ಎಂದು ಅವರು ಹೇಳಿದರೆ, ಮೋದಿ ನಿನ್ನ ಕಮಲ ಅರಳುತ್ತದೆ ಎಂದು ಜನರು ಹೇಳುತ್ತಿದ್ದಾರೆ.
ಡಬಲ್ ಇಂಜಿನ್ ಸರ್ಕಾರದ ನೀತಿ ಹಾಗೂ ನಿಯತ್ತು ಎರಡೂ ಸದೃಢವಾಗಿದೆ. ಈ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನಾವೆಲ್ಲರೂ ಒಟ್ಟಿಗೆ ಇದ್ದರೆ ಮಾತ್ರವೇ ದೇಶವನ್ನು ವಿಕಾಸ ಮಾಡುವ ಕನಸನ್ನು ನನಸಾಗಿಸಬಹುದು.
ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತವನ್ನು ಮರೆಯಲು ಸಾಧ್ಯವಿಲ್ಲ. ಕರ್ನಾಟಕದ ಹಾಗೂ ಬೆಳಗಾವಿಯ ಋಣವನ್ನು ನಾನು ಉಳಿಸಿಕೊಳ್ಳುವುದಿಲ್ಲ. ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ. ಕರ್ನಾಟಕದ ಅಭಿವೃದ್ಧಿಯ ಮೂಲಕ ಈ ಋಣವನ್ನು ತೀರಿಸುತ್ತೇನೆ ಎಂದರು.