ಬೆಳಗಾವಿ: ಅವರಿಬ್ಬರೂ ಸಂಬಂಧದಲ್ಲಿ ಅಕ್ಕ -ತಮ್ಮ. ಕೆಲಸದ ನಿಮಿತ್ತ ಬೆಳಗಾವಿ ನಗರಕ್ಕೆ ಬಂದಿದ್ದರು. ಕೆಲಸ ತಡವಾದ ಕಾರಣಕ್ಕೆ ಕೋಟೆ ಕೆರೆಯ ಪಕ್ಕ ಬಂದು ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕರ ಗುಂಪೊಂದು ಏಕಾಏಕಿ ದಾಳಿ ಮಾಡಿ, ಮನಬಂದಂತೆ (Moral Policing) ಥಳಿಸಿದೆ.
ನಿನ್ನೆ ಶನಿವಾರ (ಜ.6) ಮಧ್ಯಾಹ್ನ ಬೆಳಗಾವಿಯ ಯಮನಾಪುರದ ನಿವಾಸಿಗಳಾದ ಸಚಿನ್ ಮತ್ತು ಮುಸ್ಕಾನ್ ಯುವನಿಧಿಗೆ ಅಪ್ಲಿಕೇಷನ್ ಹಾಕಬೇಕು ಎಂದು ತಮ್ಮೂರಿನಿಂದ ಬೆಳಗಾವಿಗೆ ಬಂದಿದ್ದರು. ಅಪ್ಲಿಕೇಷನ್ ಹಾಕುವ ಕೇಂದ್ರದಲ್ಲಿ ಗದ್ದಲ ಇದ್ದ ಕಾರಣ ಸಚಿನ್ ಮತ್ತು ಮುಸ್ಕಾನ್ ಕೋಟೆ ಕೆರೆಯ ಆವರಣದಲ್ಲಿ ಮಾತಾನಾಡುತ್ತಾ ಕುಳಿತ್ತಿದ್ದರು.
ಈ ವೇಳೆ ಏಕಾಏಕಿ ದುಷ್ಕರ್ಮಿಗಳ ತಂಡವೊಂದು ಸಚಿನ್ ಹಾಗೂ ಮುಸ್ಕಾನ್ ಜತೆಗೆ ತಗಾದೆ ತೆಗೆದಿದೆ. ಮುಸ್ಲಿಂ ಹುಡುಗಿ ಜತೆಗೆ ಹಿಂದೂ ಹುಡುಗನ ಕೆಲಸ ಏನು ಎಂದು ಸಚಿನ್‌ನನ್ನು ಎಳೆದಾಡಲು ಶುರು ಮಾಡಿದ್ದಾರೆ. ನಾವು ಪ್ರೇಮಿಗಳಲ್ಲ, ಅಕ್ಕ-ತಮ್ಮ ಎಂದು ಹೇಳಿದರೂ ಸಹ ದುಷ್ಕರ್ಮಿಗಳು ಕೇಳಲಿಲ್ಲವಂತೆ. ಸಾಲದೆಂಬಂತೆ ಮುಸ್ಕಾನ್ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿ ಕೊಟ್ಟರೂ ಸಹ ಕೇಳದೆ ಇಬ್ಬರನ್ನೂ ಪಕ್ಕದಲ್ಲಿಯೇ ಇದ್ದ ಶೆಡ್‌ನಲ್ಲಿ ಕೂಡಿ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಇತ್ತ ಮುಸ್ಕಾನ್ ಮೊಬೈಲ್ ಸ್ವಿಚ್ ಆಫ್ ಆಗುತ್ತಿದ್ದಂತೆ ಆಕೆಯ ಪೋಷಕರು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರಿಗೆ ಗಲಾಟೆಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೋಟೆ ಕೆರೆ ಬಳಿ ಹುಡುಕಾಡುತ್ತಾ ಬಂದ ಸಚಿನ್ ಚಿಕ್ಕಪ್ಪ ವಾಲಪ್ಪ ಲಮಾಣಿ, ಮುಸ್ಕಾನ್ ಹಾಗೂ ಸಚಿನ್ ಕಿರುಚಾಟ ಕೇಳಿದ್ದಾರೆ. ಶೆಡ್ ಬಳಿ ಹೋದಾಗ ಹಲ್ಲೆ ನಡೆಯುತ್ತಿರುವ ವಿಚಾರ ವಾಲಪ್ಪಗೆ ತಿಳಿದಿದೆ. ಗಾಯಗೊಂಡು ನರಳಾಡುತ್ತಿದ್ದ ಸಚಿನ್ ಹಾಗೂ ಮುಸ್ಕಾನ್‌ನನ್ನು ಕೂಡಲೇ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Namma Metro : ನಮ್ಮ ಮೆಟ್ರೋ ಟ್ರ್ಯಾಕ್‌ನಲ್ಲಿ ಜಿಗಿದು ಕುಳಿತ ಬ್ಲ್ಯಾಕ್ ಕ್ಯಾಟ್! ಎದ್ದನೋ ಬಿದ್ದನೋ ಎಂದು ಓಡಿದ ಸಿಬ್ಬಂದಿ
ಧೈರ್ಯ ತುಂಬಿದ ಕೆ.ಎಸ್ ಈಶ್ವರಪ್ಪ
ಈ ಘಟನೆ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಹಲ್ಲೆಗೊಳಗಾದ ಮುಸ್ಕಾನ್ ಹಾಗೂ ಸಚಿನ್‌ರ ಆರೋಗ್ಯವನ್ನು ವಿಚಾರಿಸಿದರು. ಜತೆಗೆ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಹಲ್ಲೆಗೊಳಗಾದ ಯುವಕ ಸಚಿನ್ ಲಮಾಣಿಯ ಸಂಬಂಧಿಕರು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಸಚಿನ್‌ಗೆ ಮುಸ್ಕಾನ್ ತಂಗಿ ಆಗಬೇಕು. ಅವರಿಬ್ಬರೂ ಯುವನಿಧಿಗೆ ಅರ್ಜಿ ಹಾಕಲು ಬಂದಿದ್ದರು. ಆದರೆ ಒಂದು ಗಂಟೆ ಬಿಟ್ಟು ಬನ್ನಿ ಎಂದು ಹೇಳಿದ್ದಾರೆ. ಹೀಗಾಗಿ ಹೊರಗೆ ಕುಳಿತಿದ್ದಾಗ, ಕೆಲ ಗುಂಡಾಗಳು ಬಂದು, ಮುಸ್ಲಿಂ ಯುವತಿ ಜತೆಗೆ ಏನು ಮಾಡುತ್ತಿದ್ಯಾ? ಎಂದು ಹಲ್ಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಲ್ಲ. ಈ ಹಿಂದೆ ಬೆತ್ತಲೆ ಪ್ರಕರಣವು ನಡೆದಿದೆ. ದಿನನಿತ್ಯವು ಕೆಲ ಗುಂಡಾಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ. ಇದನ್ನೇ ಹಿಂದು ಸಂಘಟನೆಗಳು ವಿರೋಧ ಮಾಡಿದರೆ ಸಿಎಂ, ಗೃಹ ಸಚಿವರು ಕೋಮುಗಲಭೆ ಮಾಡಿಸುತ್ತಿದ್ದಾರೆ ಎಂದು ಆಪಾದನೆ ಮಾಡುತ್ತಾರೆ ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.
8 ಮಂದಿ ಅರೆಸ್ಟ್
ಇನ್ನು ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಜನರನ್ನು ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಮೂವರು ಅಪ್ರಾಪ್ತರನ್ನೂ ಸಹ ಪ್ರಕರಣಕ್ಕೆ ಸಂಬಂಧ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ಮೊಮ್ಮಹದ್ ಇನಾಮದಾರ್(22), ಆತೀಫ್ ಅಹಮ್ಮದ್ ಶೇಖ(22), ಮೊಹಮ್ಮದ್ ಅಮನ್(27) ಹಾಗೂ ಸೈಫಅಲಿ ಮಗ್ದುಮ್(27), ಉಮರ ಬಡೇಗರ್(19), ಅಜಾನ್ ಕಾಲಕುಂದ್ರಿ(19), ರಿಯಾನ್ ರೋಟವಾಲೆ(19) ಬಂಧಿತ ಆರೋಪಿಗಳು. ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧಿತ ಆರೋಪಿಗಳಿಂದ ಸ್ಥಳ ಮಹಜರ್ ಮಾಡಲಾಗಿದೆ. ಬೆಳಗಾವಿ ಕೋಟೆ ಕೆರೆ ಆವರಣದಲ್ಲಿ ಆರೋಪಿಗಳ ಮಹಜರ್ ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಆರೋಪಿಗಳಿಗೆ ತಕ್ಕ ಶಿಕ್ಷೆ
ಬೆಳಗಾವಿಯಲ್ಲಿ ಅಕ್ಕ -ತಮ್ಮನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಮ್ಸ್ ಆಸ್ಪತ್ರೆಗೆ ವಿಶ್ವ ಹಿಂದು ಪರಿಷತ್ ಸಂಘಟನೆ ಮುಖಂಡರು ಭೇಟಿ ನೀಡಿದರು. ಹಲ್ಲೆಗೊಳಗಾದ ಸಚಿನ್ ಮತ್ತು ಮುಸ್ಕಾನ್‌ರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ವಿಶ್ವ ಹಿಂದೂ ಪರಿಷತ್‌ನ ಉತ್ತರ ಕರ್ನಾಟಕ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ನೇತೃತ್ವ ತಂಡ ಭೇಟಿ ನೀಡಿದರು. ಈ ಹಲ್ಲೆಯನ್ನು ಖಂಡಿಸುತ್ತೇವೆ, ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಇಷ್ಟೆಲ್ಲ ಘಟನೆ ಆದರೂ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಣ್ಣುಮಕ್ಕಳು ತಲೆಎತ್ತಿ ಓಡಾಡುವ ಪರಿಸ್ಥಿತಿ ಇಲ್ಲ ಎಂದು ಕೃಷ್ಣ ಭಟ್ ಕಿಡಿಕಾರಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.