ಚಿಕ್ಕೋಡಿ: ದಾಯಾದಿಗಳ ಕಲಹವು ಸಾವಿನಲ್ಲಿ (Murder case) ಅಂತ್ಯವಾಗಿದೆ. ಅಣ್ಣ-ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ತಡರಾತ್ರಿ ಭೂ ವಿವಾದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಕರ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಒಬ್ಬರಿಗೊಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಹಣಮಂತ ರಾಮಚಂದ್ರ ಖೋತ (35) ಹಾಗೂ ಖಂಡೋಭಾ ತಾನಾಜಿ ಖೋತ (30) ಇಬ್ಬರು ಗಂಭೀರ ಗಾಯಗೊಂಡಿದ್ದರು.
ಕುಟುಂಬಸ್ಥರು ಇಬ್ಬರನ್ನು ಮಹಾರಾಷ್ಟ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೂಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಭೀಮಶಂಕರ್ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ಕಲಬುರಗಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು
ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರ ಫೈಟಿಂಗ್
ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಕಾಲೇಜು ಆವರಣದಲ್ಲೇ ಶಿಕ್ಷಕರು, ವಿದ್ಯಾರ್ಥಿಗಳ ಎದುರಿಗೆ ಕಿತ್ತಾಡಿಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್‌ಗೆ ನಾಗಾನಂದ ಕೆಂಪರಾಜು ಎಂಬುವವರು ಕಪಾಳ ಮೋಕ್ಷ ಮಾಡಿದ್ದಾರೆ.
ಕಳೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಿಂದ ಇವರಿಬ್ಬರ ನಡುವೆ ಮನಸ್ತಾಪಗಳು ಆರಂಭವಾಗಿತ್ತು. ಸ್ನೇಹಿತರಾಗಿದ್ದ ನಾಗನಂದ ಕೆಂಪರಾಜು ಹಾಗೂ ಜೆ.ಜಿ.ನಾಗರಾಜ ಇಂದು ಗಲಾಟೆ ಮಾಡಿಕೊಂಡಿದ್ದಾರೆ. ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಗರಾಜ್ ಮೇಲೆ ನಾಗಾನಂದ ಕೆಂಪರಾಜು ಹಲ್ಲೆ ಮಾಡಿದ್ದಾರೆ.
ಜೆ.ಜಿ.ನಾಗರಾಜ್ ಹಾಲಿ ಕಸಾಪ ಅಧ್ಯಕ್ಷ ಗೋಪಾಲ ಗೌಡ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವ ಸಿಟ್ಟು, ದ್ವೇಷಕ್ಕೆ ಹಲ್ಲೆ ಮಾಡಿರುವ ಆರೋಪವಿದೆ. ಗಾಯಾಳು ಜೆ.ಜಿ.ನಾಗರಾಜ್ ಅವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಟ್ಟಿಗೆ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಮಾರಾಮಾರಿ
ಚಿಕ್ಕಮಗಳೂರಿನಲ್ಲಿ ಕೊಟ್ಟಿಗೆ ವಿಚಾರಕ್ಕೆ ಮಾರಾಮಾರಿಯೇ ನಡೆದಿದೆ. ಕಟ್ಟಿದ ಕೊಟ್ಟಿಗೆಯನ್ನು ಕೆಡವಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಸಮನೆ ಹಳ್ಳಿಯಲ್ಲಿ ಕೊಡಲಿ, ಕತ್ತಿ, ಕೊಡಗೋಲು, ಬಡಿಗೆ ಹಿಡಿದು ಮಾರಾಮಾರಿ ನಡೆದಿದೆ. ರಾಜು ಹಾಗೂ ಯು.ಬಿ ಮಂಜಯ್ಯ ಕುಟುಂಬಗಳ ನಡುವಿನ ವ್ಯಾಜ್ಯ ಗಲಾಟೆ ನಡೆದಿದೆ. ಎರಡು ಗುಂಪುಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ