ಬೆಳಗಾವಿ: ಸ್ಮಶಾನಕ್ಕೆ ಹೋಗಲು ದಾರಿಯಿಲ್ಲ, ದಾರಿ ಮಾಡಿಕೊಡಿ ಎಂದು ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಏಣಗಿಯ ನಿವಾಸಿ ಅಬ್ದುಲ್ ಖಾದರ್ ಮಿಶ್ರಿಕೋಟಿ (65) ಎಂಬುವರ ಮೃತದೇಹವನ್ನು ಬೆಳಗಾವಿಯ ಡಿಸಿ ಕಚೇರಿ ಆವರಣದಲ್ಲಿಯೇ ಇಟ್ಟು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | ಬೆಳಗಾವಿ ಕಚೇರಿಯಲ್ಲಿ ಮರಾಠಿ ನಾಮಫಲಕಕ್ಕೆ ಎಂಇಎಸ್ ಆಗ್ರಹ: ಕನ್ನಡ ಪರ ಸಂಘಟನೆಗಳ ವಿರೋಧ
ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ, ಹಿಂದೂ-ಮುಸ್ಲೀಂ ಎರಡು ಸಮುದಾಯದ ಸ್ಮಶಾನಗಳಿಗೆ ತೆರಳಲು ಹಾದಿಯಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಿವಿ ಇದ್ದು ಕಿವುಡಾಗಿ ನಟಿಸುವವರಿಗೆ ಬುದ್ದಿ ಕಲಿಸಬೇಕು ಎಂದರೆ ಮೃತದೇಹವನ್ನು ಸ್ಮಶಾನದಲ್ಲಿ ಅಲ್ಲ ಡಿಸಿ ಕಚೇರಿಯಲ್ಲೇ ಸಮಾಧಿ ಮಾಡುತ್ತೇವೆ ಎಂದು ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಸಮಸ್ಯೆ ಬಗೆಹರಿಸುವವರೆಗೆ ಯಾವುದೇ ಕಾರಣಕ್ಕೂ ಮೃತದೇಹವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಪಟ್ಟುಹಿಡಿದರು. ಈ ಮಧ್ಯೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಎಸಿಪಿ ಸದಾಶಿವ ಕಟ್ಟಿಮನಿ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರು, ಯಾವುದಕ್ಕೂ ಪ್ರತಿಭಟನಾಕಾರರು ಜಗ್ಗಲಿಲ್ಲ.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಡಿಸಿ ನಿತೇಶ ಪಾಟೀಲ್, ಶೀಘ್ರದಲ್ಲೇ ಸ್ಮಶಾನ ಭೂಮಿ ಕೊಡುವ ಭರವಸೆ ನೀಡಿ, ಗ್ರಾಮಸ್ಥರ ಮನವೊಲಿಕೆ ಮಾಡಿ ಯಶಸ್ವಿಯಾದರು. ಪ್ರತಿಭಟನೆ ಮುಗಿಯಿತು ಎನ್ನುವಾಗಲೇ ಕೆಲ ರೈತ ಮುಖಂಡರು ಆಗಮಿಸಿ ಹೈಡ್ರಾಮಾ ಮಾಡಿದರು. ಸ್ಮಶಾನ ಭೂಮಿ ಮಂಜೂರು ಆಗುವವರೆಗೂ ಶವ ಹಸ್ತಾಂತರ ಬೇಡವೆಂದು ಪಟ್ಟು ಹಿಡಿದರು. ಈ ವೇಳೆ ರೈತ ಹೋರಾಟಗಾರ ಜಯಶ್ರೀ ಗುರೆನ್ನವರ, ಅಶೋಕ ಯಮಕನಮರಡಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ | Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ