ಬೆಳಗಾವಿ: ಆನ್ಲೈನ್ ಗೇಮಿಂಗ್ ಗೀಳಿಗೆ ಬಿದ್ದ ಬೆಳಗಾವಿ ದಂಡು ಮಂಡಳಿ ಸಿಇಒ (Online gambling) ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಕೆ. ಆನಂದ ಮೃತ ದುರ್ದೈವಿ. ಮೊದಮೊದಲು ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಹಲವರು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ನಿಗೂಢ ಸಾವಿನ ರಹಸ್ಯ ಬಯಲಾಗಿದೆ.
ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಸರ್ಕಾರಿ ನಿವಾಸದಲ್ಲಿ ಕೆ. ಆನಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡು ಮೂಲದವರಾದ ಆನಂದ್ ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದರು. ಆನಂದ ಈ ನಡುವೆ ಆನ್ಲೈನ್ ಹಾಗೂ ಆಫ್ಲೈನ್ ಗೇಮ್ಗಾಗಿ ಲಕ್ಷಾಂತರ ರೂ. ಕೈ ಸಾಲ ಮಾಡಿಕೊಂಡಿದ್ದರು. ಸಾಲದ ಹೊರಗೆ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೀರಿಸಲಾಗದಷ್ಟು ಸಾಲ ಮಾಡಿಕೊಂಡಿದ್ದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ.25ರಂದು ಬಾಗಿಲು ತಟ್ಟಿದ್ದರೂ ತೆರೆಯದೆ ಇದ್ದಾಗ ಸಿಬ್ಬಂದಿ ಆತಂಕಗೊಂಡು ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಹೊಡೆದು ಒಳ ನುಗ್ಗಿದಾಗ ಆನಂದ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: Gender Detection : ಒಂದೇ ಆಸ್ಪತ್ರೆಯಲ್ಲಿ 900 ಅಮಾಯಕ ಭ್ರೂಣಗಳ ಹತ್ಯೆ!
ದಂಡು ಮಂಡಳಿ ಮೇಲೆ ಸಿಬಿಐ ದಾಳಿ
ದಂಡು ಮಂಡಳಿಯ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 19 ರಂದು ದಂಡು ಮಂಡಳಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಸರ್ಕಾರಿ ನಿವಾಸದಲ್ಲಿ ಒಬ್ಬರೇ ವಾಸವಿದ್ದ ಆನಂದ್, ಬೆಡ್ ರೂಮ್ನಲ್ಲಿ ಮೃತದೇಹ ಪತ್ತೆ ಆಗಿತ್ತು. ಹೀಗಾಗಿ ಹಲವಾರು ಅನುಮಾನಗಳು ಹುಟ್ಟಿಕೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆ. ಆನಂದ ಅವರು 2015ನೇ ಬ್ಯಾಚ್ನ ಐಡಿಎಎಸ್ ಅಧಿಕಾರಿ ಆಗಿದ್ದರು. ಎರಡು ದಿನಗಳಿಂದ ಮನೆಯ ರೂಂ ಲಾಕ್ ಆಗಿತ್ತು. ಅನುಮಾನಗೊಂಡ ಸಿಬ್ಬಂದಿ ಶನಿವಾರ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ತೆರೆದು ನೋಡಿದಾಗ ಆನಂದ ಶವವಾಗಿ ಪತ್ತೆಯಾಗಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿ, ಹಿರಿಯ ಕ್ರೈಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದ ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ ಎಂದರು.
ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆನಂದ ಅವರ ರೂಮ್ನಲ್ಲಿ ಡೆತ್ ನೋಟ್ ಸಿಕ್ಕಿದೆ. ಬೆಡ್ ಮೇಲೆ ವಿಷದ ಬಾಟಲ್ ಸಿಕ್ಕಿದೆ. ಮೂಗಿನಿಂದ ರಕ್ತ ಬಂದಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡು ಬಂದಿದೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.