ಬೆಳಗಾವಿ: ರಾಜ್ಯ ಹೆದ್ದಾರಿಯೋ ಗುಂಡಿಗಳ (Pot holes) ರಹದಾರಿಯೋ? ಎಂಬ ಅನುಮಾನ ಶುರುವಾಗಿದೆ. ಖಾನಾಪುರದ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ದರ್ಬಾರ್ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಸ್ವಂತ ಜಿಲ್ಲೆಯಲ್ಲಿಯೇ ಇಂತಹ ಅದ್ವಾನ ಕಂಡು ಬಂದಿದೆ.
ಮೊಳಕಾಲುದ್ದ ಗುಂಡಿಗಳು ಬಿದ್ದರೂ ಸಹ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಟಗಿ ಗ್ರಾಮ ಪಂಚಾಯತ್ ಸದಸ್ಯ ಭೀಮಪ್ಪ ಭೋವಿ ಮೃತ ದುರ್ದೈವಿ. ಭೀಮಪ್ಪ ಬೈಕ್ ಓಡಿಸಿಕೊಂಡು ಬರುವಾಗ ರಸ್ತೆ ಗುಂಡಿ ಮಧ್ಯೆ ನಿಯಂತ್ರಣ ಸಿಗದೆ ಕೆಳಗೆ ಬಿದ್ದು ಪ್ರಾಣ ತೆತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಿದ್ದು ಭೀಮಪ್ಪ ಮೊಳಕಾಲು ಪೆಟ್ಟು ಮಾಡಿಕೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭೀಮಪ್ಪ ಮೃತಪಟ್ಟಿದ್ದಾರೆ. ಇತ್ತ ಅಪಘಾತಗಳು ಜರುಗುತ್ತಲೇ ಎಚ್ಚೆತ್ತ ನಂದಗಡ ಪೊಲೀಸರು ಇಟ್ಟಿಗೆಗಳನ್ನು ಗಾಡಿಯಲ್ಲಿ ತಂದು ಗುಂಡಿ ಮುಚ್ಚಿದ್ದಾರೆ. ಖಾನಾಪುರದಿಂದ ಲಿಂಗನಮಠದವರೆಗೆ ಸಂಪೂರ್ಣ ರಸ್ತೆ ಹದಗೆಟ್ಟಿದೆ.
ಇದನ್ನೂ ಓದಿ: Rameshwaram Cafe Blast: ಬಾಂಬ್ ಇರಿಸಿದ ಉಗ್ರನನ್ನು ರಾಮೇಶ್ವರಂ ಕೆಫೆಗೆ ಕರೆತಂದು ಸೀನ್ ರಿಕ್ರಿಯೇಟ್ ಮಾಡಿದ ಎನ್‌ಐಎ
ಬೈಕ್ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್
ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಸಿಲುಕಿ ಬೈಕ್ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರು ನಗರದ ಶಿವಕುಮಾರ್ ಸ್ವಾಮೀಜಿ ವೃತ್ತದಲ್ಲಿ ಅಪಘಾತ (Road Accident) ಸಂಭವಿಸಿದೆ. ತುಮಕೂರು ನಗರದ ಚೇತನ ಬಡಾವಣೆ ನಿವಾಸಿ ಚಂದ್ರಶೇಖರ್ (49) ಮೃತ ದುರ್ದೈವಿ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಶೇಖರ್ ಬೈಕ್‌ನಲ್ಲಿ ಬಟವಾಡಿ ಕಡೆಯಿಂದ ಮಹಾತ್ಮ ಗಾಂಧಿ ಸ್ಟೇಡಿಯಂ ಕಡೆಗೆ ಹೋಗುತ್ತಿದ್ದರು. ಬಲ ತಿರುವು ಪಡೆದು ಮುಂದೆ ಹೋಗಬೇಕು ಎನ್ನುವಾಗ ಕೆಎಸ್‌ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಮೇತ ಕೆಳಗೆ ಬಿದ್ದ ಚಂದ್ರಶೇಖರ್ ಅವರ ಮೇಲೆ ಬಸ್ ಹರಿದಿದೆ. ಬಸ್ ನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಚಂದ್ರಶೇಖರ್ ಅವರನ್ನು ಸ್ಥಳೀಯರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ