ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ಭಾಷೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿ ಮರಾಠಿ ಪರ ಸಂಘಟನೆ ಪ್ರತಿಭಟನೆ ನಡೆಸಲಿದ್ದು, ಇದಕ್ಕೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಳಗಾವಿಯ ಸರ್ಕಾರಿ ಕಚೇರಿಗಳಲ್ಲಿ ಹಾಗೂ ನಗರದಲ್ಲೆಡೆ ಮರಾಠಿ ನಾಮಫಲಕ ಅಳವಡಿಸುವಂತೆ ಎಂಇಎಸ್ ಸಂಘಟನೆ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಕರೆ ನೀಡಿದೆ.
ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಯಿಂದ ಬೆಳಗಾವಿಯ ಸಂಭಾಜಿರಾವ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದ್ದು, ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಲಿದೆ. ಕನ್ನಡ ಪರ ಸಂಘಟನೆಗಳು ಈ ಪ್ರತಿಭಟನೆಯನ್ನು ತೀವ್ರವಾಗಿ ವಿರೋಧಿಸಿವೆ. ಭಾಷೆ ಹಾಗೂ ಗಡಿ ಸಂಬಂಧಿಸಿದ ವಿವಾದವನ್ನು ಜೀವಂತ ಇಡಲು ಎಂಇಎಸ್ ಸಂಘಟನೆ ಹುನ್ನಾರ ನಡೆಸಿದೆ ಎಂದು ಕನ್ನಡ ಪರ ಸಂಘನೆಗಳು ಆರೋಪಿಸಿವೆ. ಬೆಳಗಾವಿಯು ಕರ್ನಾಟಕದ ಜಿಲ್ಲೆ, ಹೀಗಾಗಿ ಇಲ್ಲಿ ಕನ್ನಡ ಭಾಷೆಯೇ ಪ್ರಮುಖವಾಗಿರಬೇಕು. ಇಲ್ಲಿ ಮರಾಠಿ ಭಾಷೆ ಹೇರಿಕೆ ನಡೆಯಬಾರದು ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ.
ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಮಾಡಲಿದ್ದು, ಸರ್ದಾರ್ ಮೈದಾನದಲ್ಲೇ ಪ್ರತಿಭಟನಾ ನಿರತರನ್ನು ತಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಧಮಕಿ ಹಾಕಿದವರ ವಿರುದ್ದ ಬೆಳಗಾವಿಯಲ್ಲಿ ಬಿತ್ತು ಕೇಸ್!