ಹಾವೇರಿ: ರಾಜ್ಯದ ಕೆಲವೆಡೆ ಮಳೆಯ ಅಬ್ಬರ (Rain News) ಕಡಿಮೆಯಾಗಿದ್ದರೂ ಅವಾಂತರಗಳು, ಅವಘಡಗಳು ಮಾತ್ರ ಮುಂದುವರಿದಿವೆ. ಹಾವೇರಿ ಜಿಲ್ಲೆಯಲ್ಲಿ (Haveri News) ಮನೆಯ ಮೇಲ್ಚಾವಣಿ ಕುಸಿದು ವ್ಯಕ್ತಿಯೊಬ್ಬರು ಪ್ರಾಣ (Man dies after sealing falls on him) ಕಳೆದುಕೊಂಡಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ತಿಮಕಾಪೂರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಕಲ್ಲಪ್ಪ ಅಂಗರಗಟ್ಟಿ (50) ಎಂದು ಗುರುತಿಸಲಾಗಿದೆ. ಕಲ್ಲಪ್ಪ ಅವರ ಮನೆಯ ಚಾವಣಿಯಲ್ಲಿ ಸೋರುವಿಕೆ ಕಂಡುಬಂದಿತ್ತು. ಇದನ್ನು ತಡೆಯಲು ಪ್ಲಾಸ್ಟಿಕ್ ಹಾಸಲೆಂದು ಅವರು ಮೇಲೆ ಹತ್ತಿದ್ದರು. ಆಗ ಒಮ್ಮಿಂದೊಮ್ಮೆ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿತ್ತು. ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವರು ಮೃತಪಟ್ಟರು. ಕಾಗಿನೆಲೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಧಾರವಾಡ: ನಿರಂತರ ಮಳೆಗೆ ಕುಸಿದ ಮನೆಗಳು
ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಒಟ್ಟು 692 ಮನೆಗಳು ಕುಸಿದಿವೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾಹಿತಿ ನೀಡಿದರು. ಅಳ್ನಾವರ ಹಾಗೂ ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಮನೆಗಳ ಕುಸಿತ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಕುಸಿದ ಮನೆಗಳ ಬಗ್ಗೆ ಮಾಹಿತಿ ಪಡೆದು ಪರಿಹಾರ ನೀಡುವ ಭರವಸೆ ನೀಡಿರುವ ಅವರು ಜನರು ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ. ಮನೆ ತುಂಬಾ ಹಳೆಯ ಕಾಲದ್ದಾಗಿದ್ದರೆ ಯಾವ ಭಾಗವಾದರೂ ಹಾನಿಯಾಗಿದ್ದರೆ ಅತಿಯಾದ ಮಳೆ ಸಂದರ್ಭದಲ್ಲಿ ಅದರೊಳಗೆ ಇರುವುದು ಸುರಕ್ಷಿತವಲ್ಲ ಎಂದಿದ್ದಾರೆ.
ಬೆಳಗಾವಿ ಪಕ್ಕದಲ್ಲಿ ಹರಿದಿರುವ ಮಾರ್ಕಂಡೇಯ ನದಿ ಅಬ್ಬರ
ಬೆಳಗಾವಿಯಲ್ಲಿ ಮಾರ್ಕಂಡೇಯ ನದಿಯ ಅಬ್ಬರಕ್ಕೆ ನೂರಾರು ಎಕರೆ ಬೆಳೆ ನಾಶ ಸಂಭವಿಸಿದೆ. ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಕಬ್ಬು, ಗೋವಿನ ಜೋಳ ಮತ್ತು ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.
ರಕ್ಕಸಕೊಪ್ಪ ಜಲಾಶಯ ತುಂಬಿದ್ದರಿಂದ ಮಾರ್ಕಂಡೇಯ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಾರ್ಕಂಡೇಯ ನದಿ ನೀರು ಇನ್ನೂ ಹೆಚ್ಚಾದರೆ ಬೆಳಗಾವಿಯ ಕಂಗ್ರಾಳಿ, ಅಂಬೇವಾಡಿ ಗ್ರಾಮಗಳಿಗೆ ಆತಂಕ ಎದುರಾಗಲಿದೆ.
ಹಾಸನ: ಮಳೆ ತಗ್ಗಿದರೂ ತಗ್ಗದ ಅವಾಂತರ
ಹಾಸನ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಮಳೆಯ ಅವಾಂತರ ಕಡಿಮೆಯಾಗಿಲ್ಲ. ಒಂದು ವಾರದ ಸತತ ಮಳೆಯಿಂದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿತಕ್ಕು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ 373 ರ ಮೇಲ್ಸೇತುವೆ ತಳಪಾಯ ಕುಸಿತ ಕಂಡಿದೆ. ಮೆಲ್ಸೇತುವೆಯ ಸ್ಲ್ಯಾಬ್ ಕುಸಿದು ಸಂಪೂರ್ಣ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ. ಇದು ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಯಾಗಿದ್ದು, ಬೇಲೂರು – ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆತಂಕ ಎದುರಾಗಿದೆ.
ಪ್ರತೀ ವರ್ಷದ ಮಳೆಗಾಲದಲ್ಲಿ ಮೇಲ್ಸೇತುವೆಯ ಸ್ಲ್ಯಾಬ್ ಕುಸಿಯುತ್ತದೆ. ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಘಾಟನೆಯಾಗಿ ಮೂರು ವರ್ಷಕ್ಕೆ ಮೂರನೇ ಬಾರಿ ಈ ಸಮಸ್ಯೆ ಎದುರಾಗಿದೆ.