ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಆಪಕ್ಷೇಪಾರ್ಹ ಪೊಸ್ಟ್ ಹಾಕಿದ್ದ ಮೈಸೂರಿನ ಹಾರೋಹಳ್ಳಿ ರವೀಂದ್ರ ಅವರನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ 2017ರಲ್ಲಿ ರವೀಂದ್ರ ಫೇಸ್ಬುಕ್‌ನಲ್ಲಿ ಹಿಂದೂ ದೇವರ ವಿರುದ್ಧ ಅವಹೇಳನಾಕಾರಿ ಪೊಸ್ಟ್ ಹಾಕಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ರವೀಂದ್ರ 2019ರಿಂದ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹಾಗಾಗಿ ಅವರನ್ನು ಅರೆಸ್ಟ್ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.
ಈ ಹಿಂದೆ ಸಂಸದ ಅನಂತಕುಮಾರ ಹೆಗಡೆ ʼಜಾತ್ಯತೀತರಿಗೆ ಅಪ್ಪ-ಅಮ್ಮ ಇಲ್ಲʼ ಎಂದು ಪೋಸ್ಟ್ ಮಾಡಿದ್ದರು. ಈ ಹೇಳಿಕೆಯ ವಿರುದ್ಧ ರವೀಂದ್ರ ಹಿಂದೂ ದೇವರಿಗೆ ಅಪಮಾನ ಮಾಡಿ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಹಾಗೂ ಚಿಕ್ಕೋಡಿ ಗ್ರಾಮದ ಚೇತನ ಹೊನ್ನಗೋಳ ಕೂಡ ಅವಹೇಳನಕಾರಿ ಪೋಸ್ಟ್ ಹಾಕಿದ್ದು ಕಂಡುಬಂದಿತ್ತು. ಈ ಇಬ್ಬರ ವಿರುದ್ಧ ಚಿಕ್ಕೋಡಿ ಗ್ರಾಮದ ಕರೋಶಿ ಗ್ರಾಮದ ಚಂದ್ರಶೇಖರ ಮುಂಡೆ ಎಂಬುವರು ದೂರು ನೀಡಿದ್ದರು.
ಚೇತನ ಹೊನ್ನಗೋಳ ನ್ಯಾಯಲಯಕ್ಕೆ ಹಾಜರಾಗಿದ್ದರು ಆದರೆ ರವೀಂದ್ರ 2019ರಿಂದ ಈವರೆಗೆ ನ್ಯಾಯಲಯಕ್ಕೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ನ್ಯಾಯಾಲಯದಿಂದ ನಾನ್ ಬೇಲೆಬಲ್ ವಾರಂಟ್ ಜಾರಿ ಮಾಡಿತ್ತು. ಹಾಗಾಗಿ 2019ರಿಂದ ತಲೆಮರೆಸಿಕೊಂಡಿದ್ದ ಹಾರೋಹಳ್ಳಿ ರವೀಂದ್ರ ಅವರನ್ನು ಚಿಕ್ಕೋಡಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಚಿಕ್ಕೋಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಈ ಪ್ರಕರಣದ ಕುರಿತು ವಿಚಾರಣೆ ನಡೆದಿದೆ.
ಬಿ.ಕೆ. ಹರಿಪ್ರಸಾದ್ ಖಂಡನೆ
ಈ ಪ್ರಕರಣದ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಕಾಂಗೆಸ್ ಪಕ್ಷದ ಮುಖಂಡ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಬಿಜೆಪಿ ಸರ್ಕಾರವು ದಲಿತ ಪರ ಹೋರಾಟಗಾರರು, ಬರಹಗಾರರನ್ನು ಗುರಿಯಾಗಿಸಿಕೋಮಡು ಅವರ ವಿರುದ್ಧ ಆರೋಪಿಸಿ ಬಂಧಿಸುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದೌರ್ಜನ್ಯ. ಇದನ್ನು ನಾನು ಖಂಡಿಸುತ್ತೇನೆʼ ಎಂದು ಬಿ.ಕೆ. ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಆರೋಪಿಗಳು ಬೆಂಗಳೂರಿನಲ್ಲಿ ಅರೆಸ್ಟ್: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು