Site icon Vistara News

Road Accident : ಮರಕ್ಕೆ ಕಾರು ಡಿಕ್ಕಿ; ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣ

Car hits tree Six killed in road accident

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಈ ದುರ್ಘಟನೆ ನಡೆದಿದೆ.

ಕಾರು ಚಾಲಕ ಶಾರುಖ್ ಪೆಂಡಾರಿ (30), ಇಕ್ಬಾಲ್ ಜಮಾದಾರ್ (50), ಸಾನಿಯಾ ಲಂಗೋಟಿ (37) ಹಾಗೂ ಉಮರ್ ಲಂಗೋಟಿ (12), ಶಬನಮ್ ಲಂಗೋಟಿ ( 37), ಫರಾನ್ ಲಂಗೋಟಿ (13) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮದುವೆ ಮುಗಿಸಿ ವಾಪಸ್‌ ಮರಳುತ್ತಿದ್ದರು ಎನ್ನಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಸುಮಾರು 10 ಮಂದಿ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಇವರೆಲ್ಲರೂ ಧಾರವಾಡ ಮೂಲದವರಾಗಿದ್ದು, ಧಾರವಾಡದಿಂದ ಗೋಲಿಹಳ್ಳಿಗೆ ಹೊರಟಿದ್ದರು ಎನ್ನಲಾಗಿದೆ. ನಾಲ್ವರು ಗಾಯಾಳುಗಳನ್ನು ಸ್ಥಳೀಯ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸುತ್ತಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಛಿದ್ರಗೊಂಡಿದೆ.

ಇದನ್ನೂ ಓದಿ: Attempt To Murder : ಬಸ್‌ ತಡೆದು ಅಪ್ರಾಪ್ತೆಯ ಕತ್ತು ಕೊಯ್ದ ಬಾಲಕರು!

ಪಲ್ಟಿ ಹೊಡೆದ ಗೂಡ್ಸ್ ಗಾಡಿಯಲ್ಲಿ ಬೆಂಕಿ

ಕೊಡಗಿನ ಮಾಕುಟ್ಟ ಬಳಿ ಗೂಡ್ಸ್ ಗಾಡಿಗೆ ಬೆಂಕಿ ತಗುಲಿದೆ. ವೀರಾಜಪೇಟೆ- ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಪಿಕ್ ಅಪ್ ವಾಹನದಲ್ಲಿ ಗ್ಲೂಕೋಸ್ ಸಾಗಿಸಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿಕೊಂಡಿದೆ, ಆಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಸತೀಶ್ ಸೇರಿದಂತೆ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಾಕುಟ್ಟ ಅರಣ್ಯಪ್ರದೇಶದ ಬಳಿ ರಾತ್ರಿ ಈ ಘಟನೆ ನಡೆದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸ್ಕಿಡ್‌ ಆದ ಬೈಕ್‌, ಇಬ್ಬರು ಗಂಭೀರ

ಚಿತ್ರದುರ್ಗದ ಕೊಳಹಾಳ್ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಬೈಕ್‌ ಸ್ಕಿಡ್‌ ಆಗಿ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಆಲಘಟ್ಟ ಗ್ರಾಮ ನಿವಾಸಿ ಪ್ರದೀಪ್, ನಾಗರಾಜಪ್ಪಗೆ ಗಂಭೀರ ಗಾಯವಾಗಿದೆ. ಭರಮಸಾಗರ ಕಡೆಗೆ ಹೋಗುವಾಗ ಬೈಕ್ ಸ್ಕಿಡ್ ಆಗಿ ಡಿವೈಡೆರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಭರಮಸಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version