Site icon Vistara News

ಬೆಳಗಾವಿ ಕನ್ನಡ ಭವನದಲ್ಲಿ ಕಿತ್ತಾಟ | ಕನ್ನಡ- ಸಂಸ್ಕೃತಿ ಇಲಾಖೆ ಉಪನಿರ್ದೇಶಕಿಯನ್ನು ಹೊರಗೆ ಕಳುಹಿಸಿದ ನಾಯಕರು

kannada bhavana

ಬೆಳಗಾವಿ: ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ನಡೆಸಿದ ಕನ್ನಡ ಭವನ ಉದ್ಘಾಟನೆಗೂ ಮುನ್ನ ಕನ್ನಡ ಭವನ ಆಡಳಿತ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದ್ದು, ಇಲಾಖೆ ಉಪನಿರ್ದೇಶಕರನ್ನು ಹೊರಗೆ ಕಳುಹಿಸಲಾಗಿದೆ.

ನಿನ್ನೆ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಭವನ ರಂಗಮಂದಿರ ಉದ್ಘಾಟಿಸಿದ್ದರು. ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ‌ ಭಜಂತ್ರಿ ಹಾಗೂ ಕನ್ನಡ ಭವನ ಆಡಳಿತ ಮಂಡಳಿ ಸದಸ್ಯರ ಮಧ್ಯೆ ವಾಗ್ವಾದ ನಡೆದಿತ್ತು.

ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಪಡೆಯಲಾಗಿದೆ. ಜೊತೆಗೆ ವಿಶ್ವ ಕನ್ನಡ ಸಮ್ಮೇಳನ ವೇಳೆ ಉಳಿದ ಹಣ ಬಳಕೆ ಮಾಡಿ ಕನ್ನಡ ಭವನ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಮಫಲಕ ಹಾಕಿ, ಭವನ ನಿರ್ವಹಣೆ ನಮಗೆ ನೀಡಿ ಎಂದು ಕೇಳಲು ಉಪನಿರ್ದೇಶಕಿ ವಿದ್ಯಾವತಿ‌ ಭಜಂತ್ರಿ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಕನ್ನಡ ಭವನ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಕೋರೆ ಮತ್ತಿತರ ಸದಸ್ಯರು ವಿದ್ಯಾವತಿ ಭಜಂತ್ರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸಿಎಂ ಕಾರ್ಯಕ್ರಮದಿಂದ ಮಹಿಳಾ ಅಧಿಕಾರಿಯನ್ನು ಡಿಸಿ ನಿತೇಶ ಪಾಟೀಲ್ ಹೊರಗೆ ಕಳಿಸಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಣ ವಿಚಾರವಾಗಿಯೂ ಉಭಯ ಬಣಗಳ ನಡುವೆ ಮುನಿಸು ಸೃಷ್ಟಿಯಾಗಿತ್ತು. ಕನ್ನಡ ಭವನ ಆಡಳಿತ ಮಂಡಳಿ ಮೊದಲು ತನ್ನದೊಂದೇ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಕಾರ್ಯಕ್ರಮ ಆಹ್ವಾನ ಪತ್ರಿಕೆಯನ್ನು ಚೇಂಜ್ ಮಾಡಿಸಿತ್ತು. ಇದೀಗ ಕನ್ನಡ ಭವನ ನಿರ್ವಹಣೆ ವಿಚಾರವಾಗಿ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳ ಮಧ್ಯೆ ಕಿತ್ತಾಟ ಶುರುವಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ| ಬೆಳಗಾವಿಯಲ್ಲ, ಕೇಂದ್ರಾಡಳಿತ ಪ್ರದೇಶ ಮಾಡಬೇಕಾಗಿರುವುದು ಮುಂಬಯಿಯನ್ನು!

Exit mobile version