Site icon Vistara News

ಬೆಳಗಾವಿ ಅಧಿವೇಶನ | ಸಾವರ್ಕರ್‌ ಸೇರಿ 7 ಮಹನೀಯರ ಫೋಟೊ ಅನಾವರಣ; ವಿರೋಧಿಸದ ಕಾಂಗ್ರೆಸ್‌ ಬುದ್ಧಿವಂತಿಕೆಯ ನಡೆ

Belgavi session seven photos of eminent personalities unveiled in belagavi suvarna soudha

ಬೆಳಗಾವಿ:‌ ವಿಧಾನಸಭೆ ಚುನಾವಣೆಗೂ ಮುನ್ನ ಭಾರೀ ವಿವಾದ ಸೃಷ್ಟಿಸಬಹುದು ಎಂದು ಅಂದಾಜಿಸಲಾಗಿದ್ದ, ಬೆಳಗಾವಿ ಸುವರ್ಣ ಸೌಧದಲ್ಲಿ ಮಹನೀಯರ ಫೋಟೊ ಅನಾವರಣ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನೆರವೇರಿದೆ.

ಸ್ಪೀಕರ್‌ ಕುರ್ಚಿಯ ಬಲಭಾಗದಲ್ಲಿ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಚಿತ್ರಗಳಿದ್ದರೆ ಸ್ಪೀಕರ್‌ ಕುರ್ಚಿಯ ಎಡಭಾಗದಲ್ಲಿ ಮಹಾತ್ಮ ಗಾಂಧೀಜಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹಾಗೂ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್‌ ಚಿತ್ರಗಳಿವೆ. ಸ್ಪೀಕರ್‌ ಕುರ್ಚಿಯ ಹಿಂದಿನ ಮೇಲ್ಭಾಗದಲ್ಲಿ ಜಗಜ್ಯೋತಿ ಬಸವೇಶ್ವರರ ಚಿತ್ರವನ್ನು ಅಳವಡಿಸಲಾಗಿದೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ.ಸಿ‌ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಬೈರತಿ ಬಸವರಾಜ್, ಪ್ರಭು ಚೌವ್ಹಾಣ್ ಮುಂತಾದವರೊಂದಿಗೆ ಚಿತ್ರಗಳನ್ನು ಅನಾವರಣ ಮಾಡಲಾಯಿತು.

ಆಹ್ವಾನ ನೀಡಲಾಗಿತ್ತಾದರೂ ನಿರೀಕ್ಷೆಯಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಾರೂ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಮುಖ್ಯವಾಗಿ ಸಾವರ್ಕರ್‌ ಭಾವಚಿತ್ರವನ್ನು ಅಳವಡಿಸಿರುವುದರಿಂದ ಅದಕ್ಕೆ ವಿರೋಧವಾಗಿ ಭಾಗವಹಿಸದೇ ಇರಲು ನಿರ್ಧಾರ ಮಾಡಿದ್ದರು.

ಕಾಂಗ್ರೆಸ್‌ ಬುದ್ಧಿವಂತಿಕೆಯ ನಡೆ

ಸಾವರ್ಕರ್‌ ಭಾವಚಿತ್ರ ಅಳವಡಿಕೆ ಎಂದ ಕೂಡಲೆ ಕಾಂಗ್ರೆಸ್‌ ವಿರೋಧ ಮಾಡುತ್ತದೆ, ಆಗ ಕಾಂಗ್ರೆಸನ್ನು ದೇಶದ್ರೋಹಿ ಪಕ್ಷ ಎಂಬ ಸುಳಿಯಲ್ಲಿ ಸಿಲುಕಿಸಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಚುನಾವಣೆ ವರ್ಷದಲ್ಲಿ ತರಾತುರಿಯ ನಿರ್ಧಾರ ಬೇಡ ಎಂದು ನಿರ್ಧರಿಸಿದ ಕಾಂಗ್ರೆಸ್‌ ನಾಯಕರು ಯಾವ ಭಾವಚಿತ್ರವನ್ನೂ ವಿರೋಧಿಸಲಿಲ್ಲ.

ವಿಧಾನಸಭೆಯ ಮೆಟ್ಟಿಲುಗಳ ಮೇಲೆ ಕುಳಿತು ವಾಲ್ಮೀಕಿ, ಕುವೆಂಪು, ಕನಕದಾಸರು ಸೇರಿ ಅನೇಕ ದಾರ್ಶನಿಕರು, ಸಾಹಿತಿಗಳ ಭಾವಚಿತ್ರವನ್ನೂ ಅಳವಡಿಸಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ಯಾವುದೇ ಭಾವಚಿತ್ರವನ್ನೂ ವಿರೋಧ ಮಾಡುತ್ತಿಲ್ಲ. ಆದರೆ ಇಂತಹ ನಿರ್ಧಾರ ಮಾಡುವ ಮುನ್ನ ಎಲ್ಲರ ಜತೆಗೆ ಚರ್ಚೆ ಮಾಡಬೇಕಿತ್ತು. ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರೂ ಸೇರಿ ಅನೇಕರ ಭಾವಚಿತ್ರಗಳನ್ನು ಅಳವಡಿಸಬಹುದಿತ್ತು. ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿಲ್ಲ. ಇನ್ನಷ್ಟು ಮಹನೀಯರ ಭಾವಚಿತ್ರ ಸೇರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ತಂತ್ರ ಉಪಯೋಗಿಸುತ್ತಿದೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, ಈ ಸರ್ಕಾರ ಬಂದ ಮೇಲೆ ಜನರ ಸಮಸ್ಯೆಗಳನ್ನು ಮರೆತುಬಿಟ್ಟಿದೆ. ಇದೆಲ್ಲವನ್ನೂ ದಾರಿತಪ್ಪಿಸಲು ಪ್ರಯತ್ನ ನಡೆಯುತ್ತಿದೆ. ಸ್ಪೀಕರ್‌ ಕಚೇರಿಯಿಂದ ಫೋನ್‌ ಮಾಡಿ ಕಾರ್ಯಕ್ರಮದ ಬಗ್ಗೆ ಹೇಳಿದರು. ಮಹಾತ್ಮಾ ಗಾಂಧೀಜಿ ಮುಂತಾದವರ ಫೋಟೊ ಎಂದು ನಾವು ಭಾಗವಹಿಸಲು ನಿರ್ಧರಿಸಿದ್ದೆವು. ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದು ಸತ್ಯ. ಅವರಿಗೂ ಕರ್ನಾಟಕಕ್ಕೂ ಸಂಬಂಧವಿಲ್ಲ, ಅವರೊಬ್ಬ ವಿವಾದಿತ ವ್ಯಕ್ತಿ. ಅದರ ಬಗ್ಗೆ ಚರ್ಚೆಗಿಂತಲೂ ಹೆಚ್ಚಾಗಿ ನಾವು, ಪಂಡಿತ್‌ ನೆಹರೂ, ಶಿಶುನಾಳ ಷರೀಫ್‌, ನಾರಾಯಣ ಗುರು, ಕನಕದಾಸರು, ಬಾಬು ಜಗಜೀವನ್‌ ರಾಮ್‌ ಫೋಟೊ ಸೇರಿ ಅನೇಕ ನಾಯಕರ ಫೋಟೊ ಅಳವಡಿಸಬೇಕು ಎಂದು ಹೇಳುತ್ತಿದ್ದೇವೆ. ಬಿಜೆಪಿಯವರದ್ದು ಬೂಟಾಟಿಕೆಯ ಹಿಂದುತ್ವ. ನಾವು ನಿಜವಾದ ಹಿಂದುಗಳು. ನಾವು ಆಚರಣೆಯನ್ನು ಮಾಡುತ್ತೇವೆ ಎಂದರು.

ಸಮಾಜ ಸುಧಾರಕರ ಫೋಟೊ ಅಳವಡಿಸುವಂತೆ ಕಾಂಗ್ರೆಸ್‌ ಒತ್ತಾಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತನಾಡಿ, ಪೋಟೋ ಅನಾವರಣ ವಿಚಾರ ಗೌಪ್ಯವಾಗಿಟ್ಟಿದ್ದಾರೆ. ಸದನದ ಹೊರಗೂ, ಒಳಗೂ ಹೋರಾಟ ಮಾಡುತ್ತೇವೆ. ಮುಂದಿನ ಹೋರಾಟದ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕರು ನಾಯಕರ ತೀರ್ಮಾನ ಮಾಡುತ್ತಾರೆ. ದೇಶಕ್ಕಾಗಿ ಹೋರಾಟ ಮಾಡಿದವರು ಬಹಳ ಜನ ಇದ್ದಾರೆ, ಅವರ ಪೋಟೋ ಅಲ್ಲಿ ಬರಲಿ. ಖಂಡಿತವಾಗಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟಿಗೆ ಸಿಲುಕಿಸುವ ಕೆಲಸ ಮಾಡುತ್ತಾರೆ. ನಾವು ಇಕ್ಕಟಿಗೆ ಸಿಲುಕಬಾರದು ಎಂದು ಹೋರಾಟ ಮಾಡುತ್ತಾ ಇದ್ದೇವೆ ಎಂದರು.

ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ವಿಧನಾಸಭೆಯ ಒಳಗೆ ಯಾರದ್ದಾದರೂ ಭಾವಚಿತ್ರ ಹಾಕುವುದಾದರೆ ಮೊದಲೇ ತಿಳಿಸಬೇಕು. ಬಿಎಸಿ ಸಭೆಯಲ್ಲಿ ಪಕ್ಷದ ನಾಯಕರಿಗೆ ತಿಳಿಸಬೇಕು. ಆ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು. ಅಭಿಪ್ರಾಯ, ಸಲಹೆ ಪಡೆದುಕೊಳ್ಳಬೇಕು. ಆದರೆ ಸರ್ಕಾರ ಯಾವುದನ್ನೂ ಮಾಡದೇ ಏಕಾಏಕಿ ಫೋಟೊ ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಫೋಟೊ ಅನಾವರಣ ಮಾಡುವ ಪ್ರಯತ್ನ ಮಾಡುತ್ತಿದೆ ಎಂದರು.

ಜೆಡಿಎಸ್‌ ಉಪನಾಯಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಇದು ಬಿಜೆಪಿಯ ಹಿಡನ್ ಅಜೆಂಡಾ. ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಇಷ್ಟು ದಿನ ಸುಮ್ಮನಿದ್ದು , ಈಗ ತರುವ ಅವಶ್ಯಕತೆ ಏನಿತ್ತು? ಅವರಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಬೇಕಾಗಿಲ್ಲ. ಗಲಾಟೆ ನಡುವೆ ಬಿಲ್ ಪಾಸ್ ಮಾಡಿಕೊಳ್ಳಲು ಹೊರಟಿದ್ದಾರೆ‌. ನಾವು ಜನಪರವಾಗಿದ್ದೇವೆ, ಅದಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪಂಚರತ್ನ ಮಾಡಿದ್ದಾರೆ. ಅವರು ಪಂಚರತ್ನದಲ್ಲಿ ಭಾಗಿಯಾಗುತ್ತಾರೆ. ನಾಳೆ ಜೆಡಿಎಲ್‌ಪಿ ಸಭೆ ಮಾಡುತ್ತೇವೆ. ಯಾವ ವಿಷಯಗಳು ಪ್ರಸ್ತಾಪ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ಕಾಂಗ್ರೆಸ್ ಮೊದಲಿನಿಂದಲೂ ರಾಷ್ಟ್ರೀಯ ವಿಚಾರಗಳ ವಿರೋಧಿಗಳು. ರಾಷ್ಟ್ರೀಯ ವಿಚಾರಗಳನ್ನು ಮಾತನಾಡುವವರನ್ನು ವಿರೋಧಿಸುತ್ತಿದ್ದಾರೆ. ಕೇವಲ ಸಾವರ್ಕರ್ ಮಾತ್ರವಲ್ಲ, ನೇತಾಜಿ ಬೋಸ್, ಇತ್ತೀಚಿಗೆ ಗಾಂಧಿಜಿಯನ್ನು ಯಾವ ರೀತಿ ಕಾಂಗ್ರೆಸ್ ನಡೆಸುಕೊಳ್ಳುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ನಡೆಯಿಂದ ಯಾವುದೇ ನಷ್ಟವಿಲ್ಲ ಎಂದರು.

ಇದನ್ನೂ ಓದಿ | Belagavi session | ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೊ: ಕಾಂಗ್ರೆಸ್‌ ಮೌನದ ಹಿಂದಿದ್ದಾರೆ ಸೋನಿಯಾ ಗಾಂಧಿ!

Exit mobile version