Site icon Vistara News

ಸೂಕ್ತ ವೇತನಕ್ಕೆ ಆಗ್ರಹಿಸಿ ಮೇ 17ರಂದು ಅಶಾ ಕಾರ್ಯಕರ್ತೆಯರ ಪ್ರತಿಭಟನೆ

ಬಳ್ಳಾರಿ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮೇ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಹೋರಾಟ ನಡೆಯಲಿದೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೋನಾ ಸಂದರ್ಭದಿಂದ ಈವರೆಗೆ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಪ್ರೋತ್ಸಾಹ ಧನ ಅಥವಾ ವೇತನ ದೊರಕಿಲ್ಲ ಎಂದು ಡಿ. ನಾಗಲಕ್ಷ್ಮೀ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. RCH ಪೋರ್ಟಲ್‌ ಆಶಾ ಕಾರ್ಯಕರ್ತೆಯರ ಕೆಲಸವು ದಾಖಲಾತಿ ಮಾಡುವ ಆನ್‌ಲೈನ್‌ ಪೋರ್ಟಲ್‌. ಆಶಾ ಕಾರ್ಯಕರ್ತೆಯರು ಮಾಡಿದಂತಹ ಕಾರ್ಯಗಳು ಈವರೆಗೆ ಸರ್ಕಾರದ RCH ಪೋರ್ಟಲ್‌ನಲ್ಲಿ ದಾಖಲಾಗಿಲ್ಲ. ಸರ್ಕಾರವು RCH ಪೋರ್ಟಲ್‌ ಸರಿಪಡಿಸುವಂತೆ ಹಾಗೂ ತಮ್ಮ ಕಾರ್ಯಗಳು ಅದರಲ್ಲಿ ಸರಿಯಾಗಿ ದಾಖಲಾಗುವಂತೆ ಆಗ್ರಹಿಸಿದರು. ಅಲ್ಲದೆ, ಈಗಾಗಲೇ ಅನೇಕ ಸರ್ವೇಗಳನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದು, ಮೊಬೈಲ್‌ ಆಪ್‌ ಮೂಲಕ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರವು ಈ ಎಲ್ಲಾ ಕಾರ್ಯಗಳಿಗೆ ಸೂಕ್ತ ವೇತನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿ. ನಾಗಲಕ್ಷ್ಮೀ ʼಆಶಾ ಕಾರ್ಯಕರ್ತೆಯರಿಗೆ ನೀಡಬೇಕಾಗಿದ್ದ ವೇತನದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಆಗುತ್ತಿದೆ. ಇದನ್ನು ತಡೆದು ನಮ್ಮ ಬೇಡಿಕೆಗಳನ್ನು ಪೂರೈಸಬೇಕುʼ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಸೆಂಟರ್‌ (AIUTUC) ಸಹಯೋಗದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಮೇ 17 ರಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ ಸುಮಾರು 45 ಸಾವಿರ ಆಶಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

Exit mobile version