ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ (Ballari News) ಮುಳುಗಡೆ ಭೀತಿ ಹೆಚ್ಚಾಗಿದೆ. ಅಲ್ಲದೆ ಸೇತುವೆ ಮೇಲಿನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ನದಿಗೆ ಶುಕ್ರವಾರ 90 ಸಾವಿರಕ್ಕೂ ಅಧಿಕ ಕ್ಯೂಸೆಕ್‌ನಷ್ಟು ನೀರು ಹರಿದು ಬಂದಿದೆ. ಇನ್ನು ಸೇತುವೆ ಮಟ್ಟಕ್ಕೆ ಒಂದು ಅಡಿಯಷ್ಟು ಮಾತ್ರ ನೀರು ಕಡಿಮೆಯಿದ್ದು, ಯಾವ ಕ್ಷಣದಲ್ಲಾದರೂ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆ ಇದೆ. ಅಲ್ಲದೇ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ ಹೆಚ್ಚಾಗಿದೆ.
ಇದನ್ನೂ ಓದಿ: Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?
ಸೇತುವೆಗೆ ಗಿಡಗಂಟಿಗಳು ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ಪುರಸಭೆ ಅಧಿಕಾರಿಗಳು ನಿರತರಾಗಿದ್ದಾರೆ. ಇನ್ನು ನದಿ ಪಾತ್ರ ಜನತೆಗೆ ತಮ್ಮ ಮನೆಗಳು ಮುಳುಗುವ ಆತಂಕ ಒಂದೆಡೆ ಆದರೆ ಇನ್ನೊಂದೆಡೆ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗುವ ಭಯದಲ್ಲಿ ರೈತರಿದ್ದಾರೆ. ಯಾವುದೇ ರೀತಿಯ ಅಪಾಯಗಳು ಜರುಗದಂತೆ ಕ್ರಮ ವಹಿಸಲು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಅಲ್ಲದೇ ಸೇತುವೆಯ ಬಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಪ್ರಕೃತಿ ವಿಕೋಪ ಮುಂಜಾಗ್ರತಾ ಪೂರ್ವಭಾವಿ ಸಭೆ
ಕಂಪ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರವಾಹ, ಪ್ರಕೃತಿ ವಿಕೋಪ ಮುಂಜಾಗ್ರತೆ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಗೆ ಯಾವುದೇ ಕ್ಷಣದಲ್ಲಾದರೂ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುಬಹುದು. ಅಲ್ಲದೇ ಪ್ರವಾಹ ಪ್ರಕೃತಿ ವಿಕೋಪಗಳು ಜರುಗುವ ಸಂಭವಗಳಿವೆ. ಇದರಿಂದಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಸಮರ್ಥವಾಗಿ ಎದುರಿಸೋಣ ಎಂದರು.
ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್
ಇನ್ನು ನದಿಪಾತ್ರದ ಜನತೆ ನದಿಗೆ ಬಟ್ಟೆ ಒಗೆಯಲು ತೆರಳುವುದು, ಮೀನುಗಾರರು ಮೀನು ಹಿಡಿಯಲು ನದಿಗ ಇಳಿಯಬಾರದು. ಸ್ಥಳೀಯರು ಈ ಕೂಡಲೇ ಜನಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸ್ಥಳೀಯ ಆಡಳಿತ ಡಂಗುರ ಹೊಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು.
ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಇಲಾಖೆ ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಸೂಚಿಸಿದರು. ಪ್ರವಾಹ ಸಂದರ್ಭದಲ್ಲಿ ಸೇತುವೆ, ನದಿಪಾತ್ರದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಒದಗಿಸಲು ಬ್ಯಾರಿಕೇಡ್ ಅಳವಡಿಸಬೇಕು. ಅಲ್ಲದೇ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ರೀತಿಯ ಸಮಸ್ಯೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು.
ಪ್ರವಾಹ ಮತ್ತು ನಂತರದಲ್ಲಿ ಸಾಂಕ್ರಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಿಗಾವಹಿಸಬೇಕು. ಈ ಕುರಿತು ಗ್ರಾಮೀಣ ಪ್ರದೇಶಗಳಲ್ಲಿನ ವಿಪತ್ತು ನಿರ್ವಹಣಾ ಸಮಿತಿ ಕ್ರಿಯಾಶೀಲವಾಗಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್?
ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಉಪ ತಹಸೀಲ್ದಾರ್ ಬಿ. ರವೀಂದ್ರ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ವಾಸುಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.