ಬಳ್ಳಾರಿ: ನಗರದ ವಿಮ್ಸ್‌ನ (VIMS) ಟ್ರಾಮಾಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶೇಷ ಬೆನ್ನು ಹುರಿ (ಸ್ಪೆಷಲ್ ಸ್ಪೈನ್) ಹೊರರೋಗಿ ವಿಭಾಗ ಆರಂಭಿಸಲಾಗಿದೆ ಎಂದು (Ballari News) ವಿಮ್ಸ್‌ನ ನಿರ್ದೇಶಕ ಡಾ. ಟಿ.ಎನ್.ಗಂಗಾಧರ ಗೌಡ ತಿಳಿಸಿದ್ದಾರೆ.
ಬೆನ್ನುಮೂಳೆ, ಬೆನ್ನು ಹುರಿಗೆ ಸಂಬಂಧಿಸಿದ ನರತಂತುಗಳ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಸೌಲಭ್ಯ ಲಭ್ಯವಿದೆ. ಆಧುನಿಕ ಎಂಡೋಸ್ಕೋಪಿ ಮತ್ತು ಮೈಕ್ರೋಸ್ಕೋಪಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಲಭ್ಯವಿದೆ.
ಇದನ್ನೂ ಓದಿ: Pustaka Sante: ಫೆ. 10, 11ರಂದು ತಪ್ಪದೇ ಬನ್ನಿ ʼಪುಸ್ತಕ ಸಂತೆʼಗೆ!
ಟ್ರಾಮಾಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರ ಸ್ಪೆಷಲ್ ಸ್ಪೈನ್ ಓಪಿಡಿ ಆರಂಭಿಸಲಾಗಿದ್ದು, ಅದೇ ರೀತಿ ಬುಧವಾರ ಮೆದುಳು ಓಪಿಡಿ ಚಿಕಿತ್ಸಾ ಸೌಲಭ್ಯ ವ್ಯವಸ್ಥೆಯು ಕೊಠಡಿ ಸಂ: 41, 42, 43ರಲ್ಲಿ ಲಭ್ಯವಿರುತ್ತದೆ.
ಕಳೆದ 14 ವರ್ಷಗಳಿಂದ ವಿಮ್ಸ್‌ನಲ್ಲಿ ಮೆದುಳು ಮತ್ತು ನರರೋಗ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಬೆನ್ನು ಮೂಳೆ, ಬೆನ್ನು ಹುರಿ, ಬೆನ್ನಿನ ನರತಂತುಗಳು, ಕುತ್ತಿಗೆನೋವು, ಬೆನ್ನು ನೋವು, ಬೆನ್ನು ಮೂಳೆ ಮುರಿತ ಮತ್ತು ಡಿಸ್ಕ್‌ನಿಂದ ಆಗುವ ಬೆನ್ನು ಮತ್ತು ಕುತ್ತಿಗೆ ನೋವು, ಬೆನ್ನಿನ ಟಿಬಿ, ಸ್ಪೈನ್ ಟ್ಯೂಮರ್ ಹಾಗೂ ಸ್ಪೈನ್, ಮೆನಿಂಗೊಸೆಲ್ ರೋಗಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಸಮರ್ಥವಾಗಿ ಮಾಡಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: Budget 2024: ನೇರ ಹಣ ವರ್ಗಾವಣೆಯಿಂದ 2.7 ಲಕ್ಷ ಕೋಟಿ ರೂ. ಉಳಿತಾಯ!
ಮೆದುಳು ಮತ್ತು ನರರೋಗ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಾದ ತಲೆಬುರುಡೆ ಮತ್ತು ಮೆದುಳಿನ ಅಪಘಾತ, ಬ್ರೈನ್ ಟ್ಯೂಮರ್, ಮೆದುಳಿನ ರಕ್ತನಾಳ ತೊಂದರೆ, ಮೆದುಳಿನ ರಕ್ತಸ್ರಾವ, ಸ್ಟ್ರೋಕ್, ಮೂರ್ಛೆರೋಗ ಚಿಕಿತ್ಸೆ, ಮೆದುಳಿನಲ್ಲಿ ನೀರು ತುಂಬುವುದು (ಹೈಡ್ರೋ ಕೆಫೆಲೆಸ್), ಹುಟ್ಟಿನಿಂದ ಉಂಟಾಗಿರುವ ಮೆದುಳಿನ ತೊಂದರೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳಿಗೆ ಆಧುನಿಕ ಉಪಕರಣಗಳ ಸೌಲಭ್ಯವಿರುತ್ತದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.