ಬಳ್ಳಾರಿ: ನಗರದ ರಾಯಲ್ (ಗಡಿಗಿ ಚೆನ್ನಪ್ಪ) ವೃತ್ತದಲ್ಲಿರುವ ಗಡಿಯಾರ ಕಂಬವನ್ನು ಜಿಲ್ಲಾಡಳಿತ ರಾತ್ರೋರಾತ್ರಿ ಜೆಸಿಬಿಗಳನ್ನು ಬಳಸಿ ತೆರವು ಮಾಡಿದೆ. ಪ್ರತಿಪಕ್ಷಗಳಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ನಗರದ ಗಡಿಗಿ ಚೆನ್ನಪ್ಪ(ರಾಯಲ್ ಸರ್ಕಲ್) ವೃತ್ತದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಲೆಬನಾನ್ ಮಾದರಿಯಲ್ಲಿ ಗಡಿಯಾರದ ಗೋಪುರ ನಿರ್ಮಾಣಕ್ಕಾಗಿ ಕೆಲವೇ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಗಡಿಯಾದ ಗೋಪುರವನ್ನು ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ರಾತ್ರೋರಾತ್ರಿ ತೆರವುಗೊಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತೆರವುಗೊಳಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದರು.
ಬಳ್ಳಾರಿಯಲ್ಲಿ ರಾತ್ರೋ ರಾತ್ರಿ ಜೆಸಿಬಿಗಳು ಗರ್ಜಿಸಿದ್ದು 2009 ಘಟನೆಯನ್ನು ಮೆಲುಕು ಹಾಕಿದಂತಿತ್ತು. ಅಂದು ಅನಧಿಕೃತವಾಗಿ ಗಡಿಯಾರದ ಗೋಪುರವನ್ನು ತೆರವುಗೊಳಿಸಿದ್ದರು. ಆದರೆ ಇಂದು ನೂತನ ಗೋಪುರ ನಿರ್ಮಾಣದ ಹಿನ್ನಲೆಯಲ್ಲಿ ಅಧಿಕೃತವಾಗಿ ತೆರವುಗೊಳಿಸಿದ್ದಾರೆ. ಅಂದು ಯಾರು ತೆರವುಗೊಳಿಸಿದರು, ಏಕೆ ತೆರವುಗೊಳಿಸಿದರು ಎಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ. ಪೊಲೀಸ್ ಠಾಣೆಯಲ್ಲಿ ಮಾತ್ರ ದೂರು ದಾಖಲಾಗಿತ್ತು, ಆದರೆ ಆರೋಪಿಗಳು ಈವರೆಗೆ ಪತ್ತೆಯಾಗಿರಲಿಲ್ಲ. ನಂತರ ಜನರು ಮತ್ತು ಕಾಂಗ್ರೆಸ್ ಪಕ್ಷದ ವಿರೋಧ ನಡುವೆ ಸಣ್ಣದಾದ ಗಡಿಯಾರದ ಗೋಪುರ ನಿರ್ಮಾಣ ಮಾಡಲಾಗಿತ್ತು. ಈಗ ದೊಡ್ಡಗೋಪುರದ ನಿರ್ಮಾಣದ ಹಿನ್ನಲೆಯಲ್ಲಿ ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
ಅಂದು ಬಿಜೆಪಿ ಸರಕಾರದ ಅವಧಿಯಲ್ಲಿ “ಅಪರಿಚಿತ” ಪ್ರಭಾವಿಗಳು ಅತ್ಯಂತ ಹಳೆಯದಾದ ಗಡಿಯಾರದ ಗೋಪುರ ತೆರವುಗೊಳಿಸಿದ್ದರೆ, ಇಂದು 7 ಕೋಟಿ ರೂ.ಗಳ ವೆಚ್ಚದಲ್ಲಿ 140 ಅಡಿ ಎತ್ತರದ, ಲೆಬನಾನ್ ಮಾದರಿಯ ಕ್ಲಾಕ್ ಟವರ್ ನಿರ್ಮಾಣಕ್ಕೆ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಮೂಲಕ ಮುಂದಾಗಿದ್ದಾರೆ.
ಕಾಂಗ್ರೆಸ್ ವಿರೋಧ
2009ರಲ್ಲಿ ಅನಧಿಕೃತವಾಗಿ ಹಳೆಯಾದ ಗಡಿಯಾರ ಗೋಪುರವನ್ನು ತೆರವುಗೊಳಿಸಿದಾಗ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಈಗ ತೆರವುಗೊಳಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ರಾತ್ರೋರಾತ್ರಿ ರಾಯಲ್ ಸರ್ಕಲ್‌ಗೆ ಬಂದು ಪ್ರತಿಭಟನೆಗೆ ಮುಂದಾಗಿದ್ದರು. ನಂತರದಲ್ಲಿ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು, ಜಿಲ್ಲಾಧ್ಯಕ್ಷರು, ಮುಖಂಡರು ಸರ್ಕಲ್‌ನಲ್ಲಿ ಪ್ರತಿಭಟನೆ ಮುಂದಾಗಿದ್ದಾರೆ.
ಮಹಾನಗರ ಪಾಲಿಕೆ ಮೇಯರ್ ಮತ್ತು ಸದಸ್ಯರಿಗೆ ಮಾಹಿತಿ ಇಲ್ಲದೇ ಅಭಿವೃದ್ಧಿ ಹೆಸರಿನಲ್ಲಿ ಏಕಾಏಕಿ ಗಡಿಗಿ ಚೆನ್ನಪ್ಪ ವೃತ್ತದಲ್ಲಿನ ಗಡಿಯಾರದ ಗೋಪುರ ತೆರವುಗೊಳಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ರಾತ್ರಿ ಕಳ್ಳತನ ಮಾಡುವ ಹೊತ್ತಿನಲ್ಲಿ ತೆರವುಗೊಳಿಸಿರುವ ಕ್ರಮ ಸರಿಯಲ್ಲ, ಏನು ಮಾಡುವುದಕ್ಕೆ ಹೊರಟಿದ್ದಾರೋ ಅರ್ಥವಾಗುತ್ತಿಲ್ಲ ಎಂದರು.
ನಾವು ಅಭಿವೃದ್ಧಿಗೆ ವಿರೋಧಿಯಲ್ಲ, ಆದರೆ ಪಾಲಿಕೆ ಮೇಯರ್ ಮತ್ತು ಸದಸ್ಯರ ಹಕ್ಕು ಚ್ಯುತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದವರು ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಕಾನೂನು ಇತಿಮಿತಿಯೊಳಗೆ ಕೆಲಸ ಮಾಡಬೇಕು. ಸರ್ಕಾರ ಪಾಲಿಕೆಯ ಆಡಳಿತದಲ್ಲಿರುವ ಕಾಂಗ್ರಸ್ ಸದಸ್ಯರನ್ನು ಕಡೆಗಣಿಸುವ ಕೆಲಸ ಮಾಡುತ್ತಿದೆ. ಪಾಲಿಕೆ ಮೇಯರ್ ಮತ್ತು ಸದಸ್ಯರ ಪರವಾನಿಗೆ ಒಪ್ಪಿಗೆ ತೆಗೆದುಕೊಂಡು ಗಡಿಯಾರ ಗೋಪುರ ನಿರ್ಮಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮೇಯರ್ ರಾಜೇಶ್ಚರಿ, ಪಾಲಿಕೆ ಸದಸ್ಯರಾದ ಗಾದೆಪ್ಪ, ನಂದೀಶ್, ಕಾಂಗ್ರೆಸ್ ಅಧ್ಯಕ್ಷ ರಫೀಕ್, ಕಾಂಗ್ರೆಸ್ ಮುಖಂಡ ಆಂಜಿನೇಯಲು ಸೇರಿದಂತೆ ಪಾಲಿಕೆ ಸದಸ್ಯರು ಇದ್ದರು.
ಪಾಲಿಕೆ ಆಯುಕ್ತರ ಸ್ಪಷ್ಟೀಕರಣ
ಜು.6, 2022ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಎನ್ಓಸಿ ಕೊಟ್ಟಿದ್ದೇವೆ. ಈ ಪ್ರಕಾರವಾಗಿಯೇ ಲೋಕೋಪಯೋಗಿ ಇಲಾಖೆಯವರು ಟೆಂಡರ್ ಕರೆದಿದ್ದಾರೆ. 15ನೇ ತಾರೀಖು ಸಾರ್ವಜನಿಕರ ಸಭೆ ನಡೆಸಿದ್ದೇವೆ, ಈಗ ತೆರವುಗೊಳಿಸುವ ಕಾರ್ಯ ಕಾನೂನು ಬದ್ಧವಾಗಿಯೇ ಮಾಡಲಾಗುತ್ತಿದೆ ಎಂದು ಪಾಲಿಕೆಯು ಆಯುಕ್ತ ರುದ್ರೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | Karnataka Politics | ಬಿಜೆಪಿ ಸೇರುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದೇನೆ; ಶ್ರೀರಾಮುಲು