ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ (Lok Sabha Election 2024) ಸಂಬಂಧ ಬಳ್ಳಾರಿ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಜಿಲ್ಲೆಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 08 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಜೂನ್ 04 ರಂದು ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೂ.04 ರಂದು ಬೆಳಿಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರದ ಕಟ್ಟಡದಲ್ಲಿ 20 ಇವಿಎಂ ಸ್ಟ್ರಾಂಗ್ ರೂಂ ಮತ್ತು 02 ಅಂಚೆ ಮತಗಳ ಸ್ಟ್ರಾಂಗ್ ರೂಂಗಳಿದ್ದು, ಮತ ಎಣಿಕೆ ಕಾರ್ಯ ಒಟ್ಟು 08 ಹಾಲ್‍ಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Weather Report : ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ; ಇದು ಸಾರ್ವಕಾಲಿಕ ದಾಖಲೆ!
ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಒಟ್ಟು 112 ಟೇಬಲ್‍ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದ್ದು, ಎರಡನೇ ಹಂತದ ತರಬೇತಿಯನ್ನೂ ನೀಡಲಾಗುವುದು. 121 ಜನರಿಗೆ ಈಗಾಗಲೆ ಕೌಂಟಿಂಗ್ ಏಜೆಂಟ್ ಆಗಿ ವೀಕ್ಷಣೆಗೆ ಪಾಸ್ ನೀಡಲಾಗಿದೆ ಎಂದರು.
88-ಹಡಗಲಿ ಕ್ಷೇತ್ರದಲ್ಲಿ ಒಟ್ಟು 218 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ 16 ಸುತ್ತು ಮತ ಎಣಿಕೆ ನಡೆಯಲಿದೆ. 89-ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, 19 ಸುತ್ತು ಮತ ಎಣಿಕೆ ನಡೆಯಲಿದೆ. 90-ವಿಜಯನಗರ ಕ್ಷೇತ್ರದಲ್ಲಿ ಒಟ್ಟು 259 ಮತಗಟ್ಟೆಗಳಿದ್ದು, ಕ್ಷೇತ್ರಕ್ಕೆ ಸಂಬಂಧಿಸಿದಂತೆ 19 ಸುತ್ತು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: T20 World Cup 2024: ಐನಾಕ್ಸ್ ದೈತ್ಯ ಪರದೆಯಲ್ಲೂ ಮೂಡಿಬರಲಿದೆ ಭಾರತದ ಪಂದ್ಯಗಳು
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 18 ಸುತ್ತು ಮತ ಎಣಿಕೆ ನಡೆಯಲಿದೆ. 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 235 ಮತಗಟ್ಟೆಗಳಿದ್ದು, 17 ಸುತ್ತು. 94-ಬಳ್ಳಾರಿ ನಗರ ಕ್ಷೇತ್ರದಲ್ಲಿ 261 ಮತಗಟ್ಟೆಗಳಿದ್ದು, 19 ಸುತ್ತು. 95-ಸಂಡೂರು ಕ್ಷೇತ್ರದಲ್ಲಿ ಒಟು 253 ಮತಗಟ್ಟೆಗಳಿದ್ದು, 19 ಸುತ್ತು ಹಾಗೂ 96-ಕೂಡ್ಲಿಗಿ ಕ್ಷೇತ್ರದಲ್ಲಿ 250 ಮತಗಟ್ಟೆಗಳಿದ್ದು, ಒಟ್ಟು 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಹಂತದ ಮತ ಎಣಿಕೆ ವಿವರವನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸಲು ಅನುವಾಗುವಂತೆ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗುವುದು ಎಂದರು.
ಮತ ಎಣಿಕೆ ಕೇಂದ್ರ ಸುತ್ತಲೂ 100 ಮೀಟರ್ ಪ್ರದೇಶ ಆವರಣದಲ್ಲಿ ವಾಹನಗಳ ಪ್ರವೇಶವಿರುವುದಿಲ್ಲ. ಮತ ಎಣಿಕೆ ಅಂಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ
ಜಿಲ್ಲೆಯ 8 ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಸುತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲಿ 01-ಎಸ್‍ಪಿ, 02-ಎಎಸ್ಪಿ, 05-ಡಿವೈಎಸ್ಪಿ, 15-ಸಿಪಿಐ, 25-ಪಿಎಸ್‍ಐ, 40-ಎಎಸ್‍ಐ, 250-ಪಿಸಿ, 04-ಕೆಎಸ್‍ಆರ್‍ಪಿ, 04 ಡಿ.ಆರ್ ತಂಡ ಸಹಿತ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್ ತಿಳಿಸಿದರು.
ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್ ಮ್ಯಾನ್; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.