Site icon Vistara News

ಗೋಡೆ ಕುಸಿದು ಮಹಿಳೆ ಸಾವು, ಮಕ್ಕಳು ಪಾರು

woman death

ಕುರುಗೋಡು: ಮಳೆಯಿಂದಾಗಿ ಶಿಥಿಲಾವಸ್ಥೆ ತಲುಪಿದ್ದ ಮನೆಯ ತಡೆಗೋಡೆ ಕುಸಿದುಬಿದ್ದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪಕ್ಕದಲ್ಲಿಯೇ ಮಲಗಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ.

ಮೃತರು ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾಕಾರ್ತೆ ಉಮಾದೇವಿ(50). ಪಕ್ಕದಲ್ಲಿಯೇ ಮಲಗಿದ್ದ ಮಕ್ಕಳಾದ ಶ್ರೀಧರ್ ಮತ್ತು ದರ್ಶನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಕಳೆದ ಹಲವು ದಿನಗಳಿಂದ ಮಳೆ ಸುರಿದ ಪರಿಣಾಮ ಮನೆಯ ತಡೆಗೋಡೆ ಮತ್ತು ಬುನಾದಿಯಲ್ಲಿ ನೀರು ಹೋಗಿತ್ತು. ಮನೆಯ ತಡೆಗೋಡೆ ಉಮಾದೇವಿ ಅವರ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗೋಡೆ ತಲೆ ಮೇಲೆ ಬಿದ್ದಿದ್ದರಿಂದ ತಲೆಯಲ್ಲಿ ರಕ್ತಸ್ರಾವವಾಗಿದೆ. ಗೋಡೆ ಬಿದ್ದ ಸದ್ದಿಗೆ ಮಕ್ಕಳು ಎದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಗೋಡೆ ಕೆಳಗೆ ಬಿದ್ದ ತಾಯಿಯನ್ನು ಮೇಲಕ್ಕೆ ಎತ್ತುವಷ್ಟರಲ್ಲಿ ತಾಯಿ ಮೃತ ಪಟ್ಟಿದ್ದರು. ಮನೆ ಇಲ್ಲದ ಕಾರಣ ಗ್ರಾಮದ ನೀರಾವರಿ ಇಲಾಖೆಯ ಹಳೆಯ ಕಟ್ಟಡದಲ್ಲಿ ಇವರು ವಾಸ ಮಾಡುತ್ತಿದ್ದರು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಗಣಪನ ವಿಸರ್ಜಿಸಿ ಬರುತ್ತಿದ್ದವರು ಕರೆಂಟ್‌ ಶಾಕ್‌ಗೆ ಬಲಿ, 3 ಸಾವು, 6 ಮಂದಿ ಗಂಭೀರ

Exit mobile version