ಬೆಂಗಳೂರು: 2024ರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Ayodhya Rama Mandir) ಬೆಂಗಳೂರಿನ ಘಂಟಾನಾದ (Temple bell from Bangalore) ಕೇಳಿಸಲಿದೆ ಎಂದರೆ ನಂಬುತ್ತೀರಾ? ಹೌದು, ಅಯೋಧ್ಯೆಯ ರಾಮ ಮಂದಿರ (Ayodhya Temple) ಎನ್ನುವುದು ಶತಕೋಟಿ ಹಿಂದೂಗಳ ಕನಸು. ಆ ಕನಸು ನನಸಾಗುವ ಕ್ಷಣ ಸನ್ನಿಹಿತವಾಗುತ್ತಿದೆ. ಹೀಗೆ ಲೋಕಾರ್ಪಣೆಗೊಳ್ಳಲಿರುವ ದೇಗುಲದಲ್ಲಿ ಮುಂದೆ ನಿತ್ಯ ನಡೆಯುವ ಪೂಜೆಯ ವೇಳೆ ಕೇಳಿಬರುವ ಘಂಟಾನಾದದಲ್ಲಿ ಬೆಂಗಳೂರಿನಿಂದ ಕಳುಹಿಸಲಾಗುತ್ತಿರುವ ಘಂಟೆಗಳ ನಾದವೂ ಇರುತ್ತದೆ.
ಸರಯೂ ನದಿ ತಟಾಕದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ದೇಗುಲದ ಗರ್ಭಗುಡಿ ನಿರ್ಮಾಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಬಾಲಾಲಯದಲ್ಲಿರುವ ಬಾಲ ರಾಮ ಜನವರಿ 22ರಂದು ಪ್ರಧಾನ ಗರ್ಭಗೃಹಕ್ಕೆ ಸ್ಥಳಾಂತರಗೊಳ್ಳಲಿದ್ದಾನೆ. ರಾಮ ಮಂದಿರದ ಗರ್ಭ ಗುಡಿಯಲ್ಲಿ ಬಳಸುವ ಪೂಜಾ ಪರಿಕರಗಳು, ಉದ್ಧರಣೆ ಪಾತ್ರೆಗಳು, ಹರಿವಾಣ ತಟ್ಟೆ, ಕಲಶಗಳನ್ನು ವಿಶೇಷ ಆಸ್ಥೆಯಿಂದ ತಯಾರಿಸಲಾಗುತ್ತದೆ. ಲಕ್ಷಾಂತರ ಭಕ್ತರು ಇದನ್ನು ಕೊಡಲು ತಾ ಮುಂದು ನಾ ಮುಂದು ಎಂದು ಮುಂದೆ ಬರುತ್ತಿದ್ದರೂ ಕೆಲವರಿಗಷ್ಟೇ ಆ ಭಾಗ್ಯ ಲಭಿಸಿದೆ. ಅಂಥವರಲ್ಲಿ ಬೆಂಗಳೂರು ಮೂಲದ ಉದ್ಯಮಿ ರಾಜೇಂದ್ರ ನಾಯ್ಡು (Businessman Rajendra Ba ಅವರು ಕೂಡಾ ಒಬ್ಬರು.
ಅವರಿಗೆ ದೇವಸ್ಥಾನದಲ್ಲಿ ಪೂಜೆಯ ವೇಳೆ ಹೊಡೆಯುವ ಘಂಟೆಗಳಲ್ಲಿ ಕೆಲವನ್ನು ಒದಗಿಸುವ ಭಾಗ್ಯ ದೊರೆತಿದೆ. ಜತೆಗೆ ಕೆಲವೊಂದು ಪೂಜಾ ಪರಿಕರಗಳನ್ನು ಕೂಡಾ ಅವರು ಒದಗಿಸಲು ಉತ್ಸುಕರಾಗಿದ್ದಾರೆ.
ಶುಕ್ರವಾರ ಬೆಂಗಳೂರಿನ ದೇವಾಲಯದಲ್ಲಿ ಅಯೋಧ್ಯೆಗೆ ಕಳುಹಿಸುವ ಘಂಟೆಗಳು ಮತ್ತು ಪೂಜಾ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಲಾಯಿತು. ಜತೆಗೆ ಬೆಂಗಳೂರಿನ ಕೆಲವು ದೇವಾಲಯಗಳಿಗೆ ಇವುಗಳನ್ನು ರಥದ ಮೂಲಕ ಒಯ್ದು ಭಕ್ತರಿಗೆ ದರ್ಶನ ಕೊಡಿಸಲಾಗಿದೆ. ಶನಿವಾರ ಇವುಗಳನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.
ಓಂಕಾರ ನುಡಿಸುವ ಘಂಟೆಗಳು
ಉದ್ಯಮಿ ರಾಜೇಂದ್ರ ನಾಯ್ಡು ಅವರು 2.5 ಟನ್ ತೂಕದ ಪ್ರಧಾನ ಘಂಟೆಯೂ ಸೇರಿದಂತೆ ಒಟ್ಟು 48 ಗಂಟೆಗಳನ್ನು ಸಿದ್ಧಪಡಿಸಿ ಅಯೋಧ್ಯೆಗೆ ಕಳುಹಿಸಿದ್ದಾರೆ. ಅದರ ಜತೆಗೆ ಸುಮಾರು 38 ಕೆಜಿ ತೂಕದ ಬೆಳ್ಳಿ ದೀಪಗಳು ಮತ್ತು ಮಂಗಳಾರತಿ ದೀಪಗಳನ್ನು ಸಮರ್ಪಿಸುತ್ತಿದ್ದಾರೆ.
ರಾಜೇಂದ್ರ ನಾಯ್ಡು ಅವರ ಕುಟುಂಬವು ತಮಿಳುನಾಡಿನ ನಾಮಕ್ಕಲ್‌ನಲ್ಲಿ ಏಳು ತಲೆಮಾರುಗಳಿಂದ ವ್ಯಾಪಾರ ನಡೆಸುತ್ತಿದೆ. ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಎಂಬ ಮೌಲ್ಡಿಂಗ್ ಕಾರ್ಖಾನೆಯಲ್ಲಿ. ಐದು ತಿಂಗಳ ಹಿಂದೆಯೇ ಘಂಟೆಗಳ ತಯಾರಿಗೆ ಸಿದ್ಧತೆಗಳನ್ನು ನಡೆಸಲಾಗಿದೆ. 48 ಗಂಟೆಗಳನ್ನು ತಯಾರಿಸಲು 45 ದಿನಗಳನ್ನು ತೆಗೆದುಕೊಂಡಿತು. ಈ ಘಂಟೆಗಳ ವಿಶೇಷತೆ ಏನೆಂದರೆ, ಅದನ್ನು ಬಾರಿಸಿದಾಗ ಓಂಕಾರದ ಶಬ್ದ ಕೇಳಿಸುತ್ತದೆ.
ಪೂಜಾ ಸಾಮಾಗ್ರಿಗಳಲ್ಲಿ ಪಂಚಭುಜಾಕೃತಿಯ ಕಂತುಲೀನ್ ದೀಪದ ಚಿಮಣಿ ವಿಶೇಷವಾಗಿದ್ದು, ಹ್ಯಾಂಡಲ್‌ನಲ್ಲಿ ನಾಗ ಚಿತ್ರವಿದೆ. ಎಲ್ಲವನ್ನೂ ಉತ್ತಮ ಕೆತ್ತನೆಗಳೊಂದಿಗೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಸ್ವಾಮಿಯ ಪೂಜಾ ಪರಿಕರಗಳನ್ನು ನೀಡುವ ಭಾಗ್ಯ ಸಿಕ್ಕಿದ್ದು ಪುಣ್ಯ ಎನ್ನುತ್ತಾರೆ ರಾಜೇಂದ್ರ ನಾಯ್ಡು.
ಆರು ಅಡಿ ಉದ್ದ, ಐದು ಅಡಿ ಅಗಲದ ಮುಖ್ಯ ಘಂಟೆ
ಇಲ್ಲಿಂದ ಕಳುಹಿಸಲಾಗುತ್ತಿರುವುದು ದೇವಸ್ಥಾನದ ಮುಖ್ಯ ಘಂಟೆ ಅಲ್ಲ. ರಾಮನ ದೇವಾಲಯದಲ್ಲಿ ಅಳವಡಿಸಲಿರುವ ಬೃಹತ್ ಮುಖ್ಯ ಘಂಟೆ ಉತ್ತರ ಪ್ರದೇಶದ ಏಟಾ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಆರು ಅಡಿ ಉದ್ದ, ಐದು ಅಡಿ ಅಗಲ. ಮೂರು ವರ್ಷಗಳ ಹಿಂದೆ 21 ಲಕ್ಷ ರೂಪಾಯಿ ವೆಚ್ಚದಲ್ಲಿ ಇದು ರಚನೆಯಾಗಿದೆ.