ಬೆಂಗಳೂರು: ಇಲ್ಲಿನ ದೇವನಹಳ್ಳಿ ಸಮೀಪವಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್ ಮುಂಭಾಗ ಮಹಿಳೆಯೊಬ್ಬರು ಕಾಫಿ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಅಪರಿಚಿತನೊಬ್ಬ ಆಕೆಯ ಒಪ್ಪಿಗೆ ಇಲ್ಲದೆ ಮೊಬೈಲ್‌ನಲ್ಲಿ ಫೋಟೊಗಳನ್ನು (Photos) ತೆಗೆಯುತ್ತಿದ್ದ. ಈ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ರವಡ ಲಕ್ಷ್ಮಿ ನಾರಾಯಣ್ ಬಂಧಿತ ಆರೋಪಿ ಆಗಿದ್ದಾನೆ. ಬೆಂಗಳೂರಿನಿಂದ ಡೆಹ್ರಾಡೂನ್‌ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಮಹಿಳೆ ಆಗಮಿಸಿದ್ದರು. ಫ್ಲೈಟ್ ಬರಲು ಇನ್ನು ಸಾಕಷ್ಟು ಸಮಯಾವಕಾಶ ಇದ್ದ ಕಾರಣ ಟರ್ಮಿನಲ್ ಮುಂಭಾಗವಿದ್ದ ಕಾಫಿ ಶಾಪ್‌ಗೆ ಹೋಗಿದ್ದರು.
ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಆರೋಪಿ ಲಕ್ಷ್ಮಿನಾರಾಯಣ್, ಕೈನಲ್ಲಿದ್ದ ಮೊಬೈಲ್ ಹಿಡಿದು ಆಕೆಯ ವಿವಿಧ ಭಂಗಿಯ ಫೋಟೊಗಳನ್ನು ಕದ್ದು ಮುಚ್ಚಿ ತೆಗೆದಿದ್ದಾನೆ. ಇದು ಮಹಿಳೆಯ ಅರಿವಿಗೆ ಬರುತ್ತಿದ್ದಂತೆ ವ್ಯಕ್ತಿಯನ್ನು ಫೋಟೊ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಯುವಕನ ಬಂಧನ
ದೇವನಹಳ್ಳಿ: ವಿಮಾನ ಹಾರಾಟದ ಸಮಯದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಕಾನ್ಪುರ ಮೂಲದ ಪ್ರತೀಕ್ 40 ಬಂಧಿತ ಆರೋಪಿ ಆಗಿದ್ದಾನೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಈತ ಯತ್ನಿಸಿದ್ದಾನೆ.
ಕುಡಿದ ಅಮಲಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಾನೆ. ಕೂಡಲೆ ಎಚ್ಚೆತ್ತುಕೊಂಡ ವಿಮಾನದ ಸಿಬ್ಬಂದಿ ಎಮರ್ಜೆನ್ಸಿ ಡೋರ್ ತೆಗೆಯುವ ಮುನ್ನವೇ ತಡೆದಿದ್ದಾರೆ. ಬೆಂಗಳೂರಿನ ಕೆಐಎಎಲ್‌ಗೆ ಆಗಮಿಸಿದ ಕೂಡಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.