ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯಾರ ಬಳಿಯಾದರೂ 20 ಕೋಟಿ ರೂ. ಇದ್ದರೆ ಏನು ಮಾಡಬಹುದು? ಒಂದೊಳ್ಳೆ ಮನೆ ಕಟ್ಟಬಹುದು, ಯುಬಿ ಸಿಟಿಯಲ್ಲಿ ಅಪಾರ್ಟ್‌ಮೆಂಟ್ ಖರೀದಿಸಬಹುದು, ಉದ್ಯಮ ಆರಂಭಿಸಬಹುದು. ಆದರೆ, ಎಸ್. ಸತೀಶ್ ಎಂಬುವರು 20 ಕೋಟಿ ರೂ. (Dog Worth Rs 20 Crore) ಕೊಟ್ಟು ಒಂದು ಮುದ್ದಾದ ಶ್ವಾನವನ್ನು ಖರೀದಿಸಿದ್ದಾರೆ. ಆ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದಾರೆ.
ಹೌದು, ಹೈದರಾಬಾದ್ ಮೂಲದ ವ್ಯಕ್ತಿಯಿಂದ ಕೌಕ್ಯಾಸಿಯನ್ ಶೆಫರ್ಡ್ ತಳಿಯ ಶ್ವಾನವನ್ನು ಎಸ್. ಸತೀಶ್ ಅವರು ಖರೀದಿಸಿದ್ದಾರೆ. ಇದಕ್ಕೆ ಕ್ಯಾಡಾಬೋಮ್ ಹೈದರ್ ಎಂದು ಹೆಸರಿಟ್ಟಿದ್ದಾರೆ. ಒಂದೂವರೆ ವರ್ಷದ ಶ್ವಾನವು 77 ಕೆಜಿ ತೂಕವಿದ್ದು, 12 ವರ್ಷ ಜೀವಿತಾವಧಿ ಹೊಂದಿದೆ. ಇದು ಇತ್ತೀಚೆಗೆ ಕೆನೆಲ್ ಕ್ಲಬ್ ಇವೆಂಟ್‌ನಲ್ಲಿ ಭಾಗವಹಿಸಿ 32 ಪದಕಗಳನ್ನು ಗೆದ್ದಿದೆ. ಇದು ಜಾರ್ಜಿಯಾ, ಅರ್ಮೇನಿಯಾ ಹಾಗೂ ರಷ್ಯಾದ ಕೆಲವೆಡೆ ಹೆಚ್ಚಾಗಿ ಕಂಡುಬರುವ ತಳಿಯಾಗಿದೆ.
ಯಾರಿವರು ಎಸ್.ಸತೀಶ್?
ಎಸ್. ಸತೀಶ್ ಅವರು ಸೆಲೆಬ್ರಿಟಿ ಡಾಗ್ ಬ್ರೀಡರ್ ಆಗಿದ್ದು, ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟ ಎಂದು ಕೂಡ ಬಯೋ ಬರೆದುಕೊಂಡಿದ್ದಾರೆ. ಉದ್ಯಮಿಯಾಗಿರುವ ಇವರಿಗೆ ದುಬಾರಿ ಕಾರು, ಬೈಕ್ ಹಾಗೂ ಶ್ವಾನಗಳನ್ನು ಸಾಕುವ ಕ್ರೇಜ್ ಇದೆ. ಹಾಗಾಗಿ, ಇವರ ಬಳಿ ಬಿಎಂಡಬ್ಲ್ಯೂ ಕಾರ್, ಹಯಬುಸಾ ಬೈಕ್ ಇದೆ. ಅದರಲ್ಲೂ, ಇವರಿಗೆ ಶ್ವಾನ ಎಂದರೆ ಪಂಚಪ್ರಾಣ. 2016ರಲ್ಲಿಯೇ ಇವರು ತಲಾ ಒಂದು ಕೋಟಿ ರೂ. ಕೊಟ್ಟು ಕೊರಿಯನ್ ಮಸ್ಟಿಫ್ ಶ್ವಾನಗಳನ್ನು ಖರೀದಿಸಿದ್ದರು.
ಇದನ್ನೂ ಓದಿ | ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!