ಬೆಂಗಳೂರು: ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ (Shakti Scheme) ಸಜ್ಜಾಗಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ವಾಹನಗಳ ಓಡಾಟವನ್ನು ಬಂದ್ ಮಾಡಿ ಹೋರಾಟ (bengaluru bandh) ನಡೆಸಲಿದ್ದಾರೆ. ಸಾರಥಿಗಳ ಸಮರದಿಂದಾಗಿ (Private Transport) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಲಿದೆ. ಖಾಸಗಿ ಕ್ಯಾಬ್, ಟ್ಯಾಕ್ಸಿಗಳು ಯಾವುದು ಸಿಗದೆ ಇರುವುದರಿಂದ ಸ್ವಂತ ವಾಹನಗಳು ಅಥವಾ ಸರ್ಕಾರಿ ಬಸ್‌ನ್ನೇ ಅವಲಂಬಿಸಬೇಕಾಗಿದೆ.
ಬಹುತೇಕ ಏರ್‌ಪೋರ್ಟ್ ಪ್ರಯಾಣಿಕರು ಖಾಸಗಿ ಟ್ಯಾಕ್ಸಿಗಳನ್ನೇ ನೆಚ್ಚಿಕೊಂಡಿದ್ದು, ಪ್ರತಿಭಟನೆ ಬಿಸಿ ತಟ್ಟಲಿದೆ. ಖಾಸಗಿ ಟ್ಯಾಕ್ಸಿಗಳು ಸಂಪೂರ್ಣ ಸ್ತಬ್ಧವಾಗಲಿದ್ದು, ಏರ್‌ಪೋರ್ಟ್‌ಗೆ ಬರುವವರಿಗೆ, ಏರ್‌ಪೋರ್ಟ್‌ನಿಂದ ತೆರಳುವವರಿಗೆ ಸಂಕಷ್ಟ ಎದುರಾಗಿದೆ. ವಿದೇಶಿದಿಂದ ಹಾಗೂ ಅಂತರಾಜ್ಯದಿಂದ ಬರುವ ಪ್ರಯಾಣಿಕರಿಗೆ ಬಂದ್ ಕುರಿತು ಮಾಹಿತಿ ಇಲ್ಲದೆ ಇರುವುದು ಸಮಸ್ಯೆ ಆಗಿದೆ. ಒಂದು ಕಡೆಯಿಂದ ಮತ್ತೊಂದೆಡೆ ತೆರಳಲು ಬಿಎಂಟಿಸಿ ಬಸ್ ಅವಲಂಬಿಸಬೇಕಾಗುತ್ತದೆ.
ಕೆ.ಎಸ್.ಟಿ.ಡಿ.ಸಿ ಟ್ಯಾಕ್ಸಿ ಲಭ್ಯ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇರು, ಮೇಗಾ, ಬ್ಲೂ ಟ್ಯಾಕ್ಸಿ, ಓಲಾ-ಉಬರ್ ಟ್ಯಾಕ್ಸಿಗಳು ಸಂಪೂರ್ಣ ಸ್ತಬ್ಧವಾಗಲಿದೆ. ಈ ಸಂಬಂಧ ಖಾಸಗಿ ಟ್ಯಾಕ್ಸಿ ಸಂಘದ ಅಧ್ಯಕ್ಷ ರಮೇಶ್ ಮಾಹಿತಿ ನೀಡಿದ್ದಾರೆ. ಪ್ರತಿನಿತ್ಯ ಏರ್‌ಪೋರ್ಟ್‌ನಿಂದ ಪಿಕಪ್ ಟ್ರಾಪ್ ಮಾಡುತ್ತಿದ್ದ 8 ಸಾವಿರ ಟ್ಯಾಕ್ಸಿಗಳ ಸೇವೆ ಇರುವುದಿಲ್ಲ. ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತಿತ್ತು. ಇನ್ನುಳಿದ 10 ರಿಂದ 15 ಸಾವಿರ ಪ್ರಯಾಣಿಕರು ಸ್ವಂತ ವಾಹನ ಹಾಗೂ ಸರ್ಕಾರಿ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ನಾಳೆಯ ಬಂದ್‌ಗೆ ಕರೆ ನೀಡಿರುವುದರಿಂದ ಖಾಸಗಿ ಕ್ಯಾಬ್‌ಗಳು ಲಭ್ಯವಿರುವುದಿಲ್ಲ. ಕೇವಲ ಕೆ.ಎಸ್.ಟಿ.ಡಿ.ಸಿ ಟ್ಯಾಕ್ಸಿ ಸೇವೆ ಮಾತ್ರ ಪ್ರಯಾಣಿಕರಿಗೆ ಲಭ್ಯ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿಯಾಗಿ 500 ಬಸ್ ಇಳಿಸಲು ಬಿಎಂಟಿಸಿ ಸಜ್ಜು
ಸೆ.11ರ ಸೋಮವಾರ ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಸಾರ್ವಜನಿಕರಿಗೆ ಅಡಚಡಣೆ ಆಗಬಾರದೆಂದು ರಸ್ತೆಗೆ ಹೆಚ್ಚುವರಿ ಬಸ್ ಇಳಿಸಲು ಬಿಎಂಟಿಸಿ ಮುಂದಾಗಿದೆ. ಬಂದ್ ಹಿನ್ನೆಲೆ 500 ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿದ್ದು, 4000 ಟ್ರಿಪ್‌ಗಳ ಸಂಚಾರ ಇರಲಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್‌ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಬಸ್ ಓಡಾಡಲಿದೆ. ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ, ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ ಹಾಗೂ ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ ಒಳ ವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ 500 ಬಸ್‌ಗಳಿಂದ 4,000 ಹೆಚ್ಚುವರಿ ಟ್ರಿಪ್‌ಗಳ ಕಾರ್ಯಾಚರಿಸಲು ಮುಂದಾಗಿದೆ.
ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲಿ ಸಂಸ್ಥೆಯ ಅಧಿಕಾರಿ ಸಿಬ್ಬಂದಿ ಹಾಗೂ ಸಾರಥಿ ಗಸ್ತು ಪಡೆಗಳಿಂದ ಸಂಸ್ಥೆಯ ಸಾರಿಗೆಗಳ ಮೇಲ್ವಿಚಾರಣೆ ನಡೆಸಲು ಬಿಎಂಟಿಸಿ ಮುಂದಾಗಿದೆ. ಪ್ರಯಾಣಿಕರ ದಟ್ಟಣೆ ಕಂಡುಬಂದ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆಗೆ ಯೋಜನೆ ರೂಪಿಸಿದೆ.
ಯಾಕಾಗಿ ಪ್ರತಿಭಟನೆ?
ಕಾಂಗ್ರೆಸ್ ಸರ್ಕಾರದ (Congress Guarantee) ಶಕ್ತಿ ಯೋಜನೆಯಿಂದ (Shakti Scheme) ನಷ್ಟವಾದ ಪರಿಣಾಮ ಬೆಂಗಳೂರು ಬಂದ್‌ಗೆ (bengaluru bandh) ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ. ಸೆ.11ರಂದು ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸೇವೆಗಳ (Private Transport) ಓಡಾಟಕ್ಕೆ ಬ್ರೇಕ್ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಕ್ಕೆ ಒಕ್ಕೂಟ ಸಜ್ಜಾಗಿದ್ದು, ಸೆಪ್ಟೆಂಬರ್ 11ರ ಬೆಂಗಳೂರು ಬಂದ್‌ಗೆ ಸುಮಾರು 32 ಖಾಸಗಿ ಸಾರಿಗೆ ಒಕ್ಕೂಟಗಳು ಸಾಥ್ ನೀಡಿವೆ. ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಚಾಲಕರು ಸಂಕಷ್ಟ ಅನುಭವಿಸುವಂತಾಗಿದೆ. ಸಾರಿಗೆ ಸಚಿವರು ಆಗಸ್ಟ್ 31ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ಡೆಡ್ ಲೈನ್ ಮುಗಿದ ಕಾರಣಕ್ಕೆ ಬೆಂಗಳೂರು ಬಂದ್‌ಗೆ ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ಸಾರಿಗೆ ಸೇವೆಗಳು ಬಂದ್ ಆಗಲಿವೆ. ಖಾಸಗಿ ಬಸ್‌ಗಳು, ಮಿನಿ ಲಗೇಜ್ ವಾಹನಗಳು, ಸ್ಕೂಲ್ ಬಸ್, ವ್ಯಾನ್, ಆಟೋ ಸೇರಿದಂತೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್, ಕಂಪೆನಿ ಕ್ಯಾಬ್‌ಗಳ ಓಡಾಟ ಇರುವುದಿಲ್ಲ.
ಸೆ.11ರಂದು ಪ್ರಮುಖ ಜಂಕ್ಷನ್, ಹೆದ್ದಾರಿಯಲ್ಲಿ ವಾಹನಗಳ ತಡೆಗೆ ಯೋಜನೆ ರೂಪಿಸಲಾಗಿದೆ. ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿ, ಮತ್ತೊಂದು ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಸರ್ಕಾರವು ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡದಿರಲು ತೀರ್ಮಾನಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ