ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ (Congress Guarantee) ಎಫೆಕ್ಟ್‌ನಿಂದ ಕಂಗಾಲಾಗಿರುವ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟವು ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್‌ಗೆ (bengaluru bundh) ಕರೆ ನೀಡಿದೆ. ಶಕ್ತಿ ಯೋಜನೆ (Shakti Scheme) ಅಡಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಖಾಸಗಿ ಸಾರಿಗೆಗಳು (Private Transport) ನಷ್ಟವನ್ನು ಅನುಭವಿಸುವಂತಾಗಿದೆ. ಈ ಸಂಬಂಧ ಸರ್ಕಾರಕ್ಕೂ ಮನವಿ ಮಾಡಿದ್ದೇವೆ, ಆದರೂ ಕ್ಯಾರೆ ಎನ್ನುತಿಲ್ಲ ಎಂದು ಒಕ್ಕೂಟ ಆಕ್ರೋಶ ಹೊರಹಾಕಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಖಾಸಗಿ ಸಾರಿಗೆ ಒಕ್ಕೂಟವು ಬೆಂಗಳೂರು ಬಂದ್‌ಗೆ ಕರೆ ನೀಡಿದೆ.
ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಕ್ಕೆ ಒಕ್ಕೂಟ ಸಜ್ಜಾಗಿದ್ದು, ಸೆಪ್ಟೆಂಬರ್ 11ರ ಬೆಂಗಳೂರು ಬಂದ್‌ಗೆ ಸುಮಾರು 32 ಖಾಸಗಿ ಸಾರಿಗೆ ಒಕ್ಕೂಟಗಳು ಸಾಥ್ ನೀಡಿವೆ. ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಚಾಲಕರು ಸಂಕಷ್ಟ ಅನುಭವಿಸುವಂತಾಗಿದೆ. ಸಾರಿಗೆ ಸಚಿವರು ಆಗಸ್ಟ್ 31ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ಡೆಡ್ ಲೈನ್ ಮುಗಿದ ಕಾರಣಕ್ಕೆ ಬೆಂಗಳೂರು ಬಂದ್‌ಗೆ ನಿರ್ಧರಿಸಿದ್ದಾರೆ.
ಸ್ಕೂಲ್ ಬಸ್ ಸೇರಿ ಈ ಸೇವೆಗಳ ಓಡಾಟ ಇರೋಲ್ಲ
ವಿವಿಧ ಬೇಡಿಕೆಗಳನ್ನು ಈಡೇರಿಸದ ಸರ್ಕಾರ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ ಮುಂದಾಗಿದೆ. ಸೆಪ್ಟೆಂಬರ್ 10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ಸಾರಿಗೆ ಸೇವೆಗಳು ಬಂದ್ ಆಗಲಿವೆ. ಖಾಸಗಿ ಬಸ್‌ಗಳು, ಮಿನಿ ಲಗೇಜ್ ವಾಹನಗಳು, ಸ್ಕೂಲ್ ಬಸ್‌ಗಳು, ಆಟೋ ಸೇರಿದಂತೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳ ಓಡಾಟ ಇರುವುದಿಲ್ಲ. ಅಂದು ಪ್ರಮುಖ ಜಂಕ್ಷನ್, ಹೆದ್ದಾರಿಯಲ್ಲಿ ವಾಹನಗಳ ತಡೆಗೆ ಯೋಜನೆ ರೂಪಿಸಲಾಗಿದೆ. ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿ, ಮತ್ತೊಂದು ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಸರ್ಕಾರವು ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡಲ್ಲ ಎಂದಿದ್ದಾರೆ.
ಓಲಾ-ಉಬರ್‌ನಿಂದ ಇಲಾಖೆಗೆ ಕಮಿಷನ್!
ಸಾರಿಗೆ ಇಲಾಖೆ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ನಟರಾಜ್ ಶರ್ಮಾ ಗಂಭೀರ ಆರೋಪವನ್ನು ಮಾಡಿದ್ದಾರೆ. ಓಲಾ-ಉಬರ್ ಕಂಪೆನಿಯಿಂದ ಸಾರಿಗೆ ಅಧಿಕಾರಿಗಳಿಗೆ ಕಮಿಷನ್ ಹೋಗುತ್ತದೆ. ಈ ಬಗ್ಗೆ ದಾಖಲೆ ಇದೆ, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಸಾರಿಗೆ ಅಧಿಕಾರಿ ಹೇಮಂತ್ ಕುಮಾರ್ ವಿರುದ್ಧ ಕಿಡಿಕಾರಿದ ಅವರು ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂದರು.
ಒಕ್ಕೂಟದ ಬೇಡಿಕೆಗಳೇನು?
-ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು.
-ಬೈಕ್, ರ‍್ಯಾಪಿಡೋ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ ಮಾಡಬೇಕು.
-ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
-ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು.
-ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುವುದಕ್ಕೆ ಬ್ರೇಕ್ ಹಾಕಬೇಕು.
-ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು.
-ಓಲಾ, ಉಬರ್ ಆ್ಯಪ್ ಆಧಾರಿತ ಸೇವೆಗಳ ನಿರ್ಬಂಧ ಮಾಡಬೇಕು.
-ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ ನೀಡಬೇಕು.
-ಖಾಸಗಿ ವಾಹನಗಳನ್ನು ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು.
-ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮವಹಿಸಬೇಕು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ