ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ತಡೆಗೆ ಪೊಲೀಸರು ಎಷ್ಟೇ ಕ್ರಮ ತೆಗೆದುಕೊಂಡರೂ ಡ್ರಗ್ಸ್ ಜಾಲ (Drugs Case) ನಿರ್ನಾಮವಾಗುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರಿನ (Bengaluru) ದೊಡ್ಡನಾಗಮಂಗಲದ ವೀರಭದ್ರಸ್ವಾಮಿ ಲೇಔಟ್‌ನಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಪತ್ತೆಯಾಗಿದೆ. ಭಾರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು (CCB Police) ಸುಮಾರು 2.04 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ವಿಕ್ಟರ್ ಒಬಿನ್ನಾ ಚುಕ್ವುಡಿ ಎಂಬಾತನು ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಸಂಗ್ರಹಿಸಿಟ್ಟಿದ್ದ. ಈ ಕುರಿತು ನಿಖರ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ, 2.43 ಕೆ.ಜಿ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಿಕ್ಟರ್ ಒಬಿನ್ನಾ ಚುಕ್ವುಡಿಯನ್ನು ಬಂಧಿಸಲಾಗಿದ್ದು, ಆತನಿಂದ ಎರಡು ಮೊಬೈಲ್ ಹಾಗೂ ಒಂದು ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿಯಿಂದ ತರಿಸಿ ಮಾರಾಟ
ವಿಕ್ಟರ್ ಒಬಿನ್ನಾ ಚುಕ್ವುಡಿ ಹಲವು ವರ್ಷಗಳಿಂದ ಡ್ರಗ್ಸ್ ಜಾಲದಲ್ಲಿ ತೊಡಗಿದ್ದು, ದೆಹಲಿಯಿಂದ ಅಕ್ರಮವಾಗಿ ಮಾದಕವಸ್ತು ತರಿಸಿ ಮಾರಾಟ ಮಾಡುತ್ತಿದ್ದ. ಡ್ರಗ್ಸ್ ಪೆಡ್ಲರ್ ಮೆಸ್ಸೋ ಎಂಬಾತನ ಮೂಲಕ ಮಾದಕವಸ್ತು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಮನೆಯಲ್ಲಿಯೇ ಸಂಗ್ರಹಿಸಿಡುತ್ತಿದ್ದ ಈತ ಪೊಟ್ಟಣಗಳನ್ನು ತಯಾರಿಸಿ ಹಲವು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Crime News: ವಿದೇಶಿ ಮೂಲದ ಯುವತಿಯರನ್ನು ಬಳಸಿಕೊಂಡು ಡ್ರಗ್ಸ್, ವೇಶ್ಯಾವಾಟಿಕೆ ಪತ್ತೆ
ವಿಕ್ಟರ್ ಒಬಿನ್ನಾ ಚುಕ್ವುಡಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾದಕವಸ್ತು ಜಾಲ ತಡೆಗೆ ಪೊಲೀಸರು ಹತ್ತಾರು ಕ್ರಮ ತೆಗೆದುಕೊಂಡರೂ, ನಿಗಾ ಇರಿಸಿದರೂ ಆಗಾಗ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಪತ್ತೆಯಾಗುತ್ತಲೇ ಇರುತ್ತದೆ. ಅದರಲ್ಲೂ, ನೈಜೀರಿಯಾ ಸೇರಿ ಹಲವು ದೇಶಗಳ ಪೆಡ್ಲರ್‌ಗಳು, ಮಾರಾಟಗಾರರೇ ಜಾಲದಲ್ಲಿ ತೊಡಗಿದ್ದಾರೆ.