ನವದೆಹಲಿ: ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಚೆನ್ನೈ (Chennai) ಮತ್ತು ಬೆಂಗಳೂರು (Bengaluru) ಮಧ್ಯೆ ರೈಲಿನಲ್ಲಿ (Train) ಸಂಚರಿಸಲು ಈಗ ಕನಿಷ್ಠ 4 .30 ಗಂಟೆಯಿಂದ 6.30 ಗಂಟೆ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಉಭಯ ನಗರಗಳ ನಡುವಿನ ರೈಲು ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ! ಹೌದು, ಭಾರತೀಯ ರೈಲ್ವೆ ಇಲಾಖೆಯು ಹೊಸ ಸೆಮಿ ಹೈಸ್ಪೀಡ್ ಬ್ರಾಡ್ ಗೇಜ್ ಮಾರ್ಗ (semi-high-speed broad gauge line) ಹಾಕಲಿದೆ. ಹಾಗಾಗಿ, ಪ್ರಯಾಣದ ಅವಧಿ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಮನೀ ಕಂಟ್ರೋಲ್ ವರದಿ ಮಾಡಿದೆ.
ದಕ್ಷಿಣ ರೈಲ್ವೆಯು ಎರಡು ನಗರಗಳ ನಡುವೆ ಹೊಸ ಸೆಮಿ-ಹೈ-ಸ್ಪೀಡ್ ಬ್ರಾಡ್ ಗೇಜ್ ಮಾರ್ಗಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆಗೆ (FLS) ಟೆಂಡರ್ ಕರೆದಿದೆ. ಉದ್ದೇಶಿತ ಮಾರ್ಗದ ವಿನ್ಯಾಸದ ವೇಗವು ಪ್ರತಿ ಗಂಟೆಗೆ 220 ಕಿ.ಮೀ ಹಾಗೂ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀ. ಇರಲಿದೆ. ಸಮೀಕ್ಷೆ ಕೈಗೊಳ್ಳಲು ರೈಲ್ವೆ ಇಲಾಖೆಯು ಈಗಾಗಲೇ 8.3 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಚೆನ್ನೈ ಸೆಂಟ್ರಲ್ ನಡುವಿನ ಮಾರ್ಗವನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಅಂದಾಜು 350 ಕಿ.ಮೀ ಇರಲಿದೆ.
ಆಯ್ದ ಸಂಸ್ಥೆಯು ವೈಮಾನಿಕ ಲಿಡಾರ್ (LiDAR) ಸಮೀಕ್ಷೆಯನ್ನು ನಡೆಸುವುದು, ವಿವರವಾದ ಅಂತಿಮ ಜೋಡಣೆಯನ್ನು ಅಭಿವೃದ್ಧಿಪಡಿಸುವುದು, ಸಂಚಾರ ಅಧ್ಯಯನವನ್ನು ಕೈಗೊಳ್ಳುವುದು, ವಿವರವಾದ ಯೋಜನೆಗಳು ಮತ್ತು ಅಂದಾಜುಗಳನ್ನು ಸಿದ್ಧಪಡಿಸುವುದು ಮತ್ತು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮೂರು ತಿಂಗಳಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಸ್ತಾವಿತ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀಟರ್ ಆಗಿದ್ದರೆ, ಸರಾಸರಿ ವೇಗವು ನಿಲುಗಡೆಗಳ ಸಂಖ್ಯೆ ಮತ್ತು ಜೋಡಣೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಮಾರ್ಗವನ್ನು 180 ಕಿಮೀ ವೇಗದಲ್ಲಿ ಓಡಲು ಅನುಕೂಹಲವಾಗುವಂತೆ ಮಾಡಲಾಗುತ್ತದೆ. ಸೂಕ್ತವಲ್ಲದ ಟ್ರ್ಯಾಕ್‌ಗಳ ಕಾರಣದಿಂದಾಗಿ ವಂದೇ ಭಾರತ್ ರೈಲುಗಳು ಪ್ರತಿಗಂಟೆಗೆ ಗರಿಷ್ಠ ವೇಗವ 130 ಕಿ.ಮೀ.ಗೆ ಸಿಮೀತವಾಗಿವೆ. ಆದಾಗ್ಯೂ, ಹೊಸ ಸೆಮಿ-ಹೈ-ಸ್ಪೀಡ್ ರೈಲು ಬ್ರಾಡ್ ಗೇಜ್ ಮಾರ್ಗದೊಂದಿಗೆ, ವಂದೇ ಭಾರತ್ ರೈಲುಗಳನ್ನು ಸಹ ಪೂರ್ಣ ಸಾಮರ್ಥ್ಯದಲ್ಲಿ ಓಡಿಸಬಹುದಾಗಿದೆ ಎನ್ನುತ್ತಿದ್ದಾರೆ ತಜ್ಞರು.
ಈ ಮಧ್ಯೆ, ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿ(NHSRCL) ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಕುರಿತು ಚಿಂತನೆ ಮಾಡುತ್ತಿದೆ. ಅಂದರೆ, ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ಬುಲೆಟ್ ಟ್ರೈನ್ ಓಡಿಸುವ ಸಾಧ್ಯತೆಗಳಿವೆ. ಈ ಬುಲೆಟ್ ಟ್ರೈನ್ ಗರಿಷ್ಠ ವೇಗವು ಗಂಟೆಗೆ 350 ಕಿ.ಮೀ ಇರಲಿದೆ. ಕಾರ್ಯಾಚರಣೆಯ ವೇಗವು 320 ಕಿ.ಮೀ ಇದ್ದರೆ, ಸರಾಸರಿ ವೇಗವು 250 ಕಿ.ಮೀ. ಇರಲಿದೆ.
ಈ ಸುದ್ದಿಯನ್ನೂ ಓದಿ: Vande Bharat Express : ಬೆಂಗಳೂರು-ಧಾರವಾಡ ನಡುವೆ ಜುಲೈನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ, ಇಲ್ಲಿದೆ ಡಿಟೇಲ್ಸ್
ಈ ಯೋಜನೆಯು ಆರು ಹೊಸ ಹೈಸ್ಪೀಡ್ ರೈಲು (ಎಚ್‌ಎಸ್‌ಆರ್) ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದೆ. ಹೀಗಿದ್ದಾಗ್ಯೂ, ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್‌ಗೆ ಪೂರ್ವಸಿದ್ಧತಾ ಕೆಲಸ ಮಾತ್ರ ಪ್ರಾರಂಭವಾಗಿದೆ ಎಂಬುದನ್ನು ಗಮನಿಸಬೇಕು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.