ಬೆಂಗಳೂರು: ಚಾಟ್‌ಜಿಪಿಟಿ ಚಾಟ್‌ಬಾಟ್ ಬಗ್ಗೆಯೇ ಈಗ ಎಲ್ಲಡೆ ಮಾತು ಕೇಳಿಬರುತ್ತಿವೆ. ಅದರಲ್ಲೂ, ಕೃತಕ ಬುದ್ಧಿಮತ್ತೆಯಿಂದ (Artificial Intelligence) ಇದು ಕಾರ್ಯನಿರ್ವಹಿಸುತ್ತಿರುವ ಕಾರಣ ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್‌ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್‌ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಹೀಗಿರುವ ಮಧ್ಯೆಯೇ, ಬೆಂಗಳೂರಿನ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್‌ಜಿಪಿಟಿಯ ಸಬ್‌ಸ್ಕ್ರಿಪ್ಶನ್‌ಅನ್ನು (ChatGPT Subscription) ಉಡುಗೊರೆಯಾಗಿದೆ ನೀಡಿದೆ.
ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್ (Capital Mind) ಎಂಬ ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಚಾಟ್‌ಜಿಪಿಟಿ ಸಬ್‌ಸ್ಕ್ರಿಪ್ಶನ್ ನೀಡಿದೆ. ಇತ್ತೀಚೆಗೆ ಚಾಟ್‌ಜಿಪಿಟಿ ಬಳಕೆಯಿಂದ ಕಂಪನಿಯ ನೌಕರರ ಕಾರ್ಯದಕ್ಷತೆ ಹಾಗೂ ಉತ್ಪಾದಕೆಯು ಜಾಸ್ತಿಯಾದ ಕಾರಣ ಚಾಟ್‌ಜಿಪಿಟಿಯ ನೋಂದಣಿಯ ಶುಲ್ಕವನ್ನು ಕಂಪನಿಯೇ ಭರಿಸಲಿದೆ ಎಂದು ಘೋಷಿಸಲಾಗಿದೆ. ಚಾಟ್‌ಜಿಪಿಟಿಯ ನೋಂದಣಿ ಶುಲ್ಕವು ಮಾಸಿಕ 1,640 ರೂ. (20 ಡಾಲರ್) ಆಗಲಿದೆ. ಇಷ್ಟನ್ನೂ ಕಂಪನಿಯೇ ನೀಡಲಿದೆ.
ಕಂಪನಿ ಸಿಇಒ ಟ್ವೀಟ್
“ಚಾಟ್‌ಜಿಪಿಟಿಯಿಂದ ನೌಕರರ ಉತ್ಪಾದಕತೆ ಹೆಚ್ಚಾಗಿದೆ. ಅದರಲ್ಲೂ, ಕಿರಿಯ ಉದ್ಯೋಗಿಗಳ ಉತ್ಪಾದಕತೆಯು 5 ಪಟ್ಟು ಜಾಸ್ತಿಯಾಗಿದೆ. ಕೋಡಿಂಗ್ ರಚನೆ ಸೇರಿ ಹಲವು ವಿಧಗಳಲ್ಲಿ ನೌಕರರಿಗೆ ಚಾಟ್‌ಜಿಪಿಟಿಯು ಅನುಕೂಲವಾಗಿದೆ. ಬೇರೆ ವ್ಯಕ್ತಿಯ ನೆರವಿಲ್ಲದೆ, ಚಾಟ್‌ಜಿಟಿಪಿಯ ಸಹಾಯದಿಂದಲೇ ನೌಕರರು ಹಲವು ವಿಷಯಗಳನ್ನು ಕಲಿಯುತ್ತಿದ್ದಾರೆ. ಇದರಿಂದ ಕಂಪನಿಯ ಉತ್ಪಾದಕತೆಯು ಹೆಚ್ಚಾಗಿದೆ. ಎಲ್ಲ ಕೆಲಸವೂ ಈಗ ಉತ್ಕೃಷ್ಟ ಮಟ್ಟದಲ್ಲಿ ಸಾಗುತ್ತಿದೆ. ಹಾಗಾಗಿ, ನೌಕರರಿಗೆ ಉಚಿತವಾಗಿ ಚಾಟ್‌ಜಿಪಿಟಿ ನೋಂದಣಿ ನೀಡಲಾಗುತ್ತಿದೆ” ಎಂದು ಕಂಪನಿಯ ಸಿಇಒ ವಶಿಷ್ಠ ಅಯ್ಯರ್ ಮಾಹಿತಿ ನೀಡಿದ್ದಾರೆ.
ಉದ್ಯೋಗ/ಉದ್ಯಮ ವಲಯವನ್ನು ಚಾಟ್ ಜಿಪಿಟಿ ಕಬಳಿಸುತ್ತಿದೆ, ಮನುಷ್ಯರು ಮಾಡುವ ಹಲವು ಸೃಜನಾತ್ಮಕ ಕೆಲಸಗಳನ್ನು ಇದು ಮಾಡುತ್ತಿರುವ ಕಾರಣ, ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಮನೆಮಾಡಿದೆ. ಚಾಟ್‌ಜಿಪಿಟಿ ಬಳಕೆ ಮಾಡುತ್ತಿರುವ ಅನೇಕರು ಒಂದಲ್ಲ ಒಂದು ಕಾರಣಕ್ಕೆ ಇದನ್ನು ಹೊಗಳುತ್ತಿದ್ದಾರೆ. ಲೇಖಕರು, ಕಂಟೆಂಟ್ ರೈಟರ್‌ಗಳು, ಕೋಡಿಂಗ್ ಕ್ಷೇತ್ರದಲ್ಲಿರುವವರಿಗೆ ಚಾಟ್‌ಜಿಪಿಟಿಯು ಮಾರಕ ಎಂಬ ವರದಿಗಳು ಕೂಡ ಲಭ್ಯವಾಗಿವೆ.
ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಚಾಟ್ ಜಿಪಿಟಿಯಿಂದ ನನ್ನ ನಾಯಿ ಬದುಕುಳಿಯಿತು ಎಂದು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ತಿಳಿಸಿದ್ದರು. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಚಾಟ್‌ಬಾಟ್ ಚಾಟ್‌ಜಿಪಿಟಿಯಿಂದ ತಮಗೆ ಆದ ಸಹಾಯವನ್ನು ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ನಾಯಿಯ ಜೀವನನ್ನು ಉಳಿಸಿದ್ದು ಚಾಟ್‌ಜಿಪಿಟಿ’ ಎಂದು ಬರೆದುಕೊಂಡಿದ್ದು, ಅದು ಹೇಗೆ ಎಂಬುದನ್ನೂ ವಿವರಿಸಿದ್ದರು. @peakcooper ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಟೋರಿ ಹಂಚಿಕೊಳ್ಳಲಾಗಿದೆ. ಅನಾರೋಗ್ಯಕ್ಕೀಡಾದ ನನ್ನ ನಾಯಿ ಸ್ಯಾಸಿಗೆ ಏನಾಗಿದೆ ಎಂದು ಕಂಡು ಹಿಡಿಯಲು ಪಶುವೈದ್ಯರಿಗೂ ಸಾಧ್ಯವಾಗಲಿಲ್ಲ. ಆದರೆ ಚಾಟ್‌ಬಾಟ್ ಚಾಟ್‌ಜಿಪಿಟಿ ನನ್ನ ನಾಯಿಯ ರೋಗ ಪತ್ತೆ ಮಾಡಿ, ಅದನ್ನು ಉಳಿಸಿಕೊಟ್ಟಿತು’ ಎಂದಿದ್ದರು.
ಇದನ್ನೂ ಓದಿ: ChatGpt: ನಾಯಿಯ ಜೀವ ಉಳಿಸಿದ ಚಾಟ್‌ಜಿಪಿಟಿ; ಪಶುವೈದ್ಯರಿಗೂ ಗೊತ್ತಾಗಲಿಲ್ಲ ಎಂದ ಶ್ವಾನದ ಮಾಲೀಕ