ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಕಿರಿಕಿರಿ. ರಸ್ತೆ ತುಂಬ ವಾಹನಗಳು, ಕೈ ಬೀಸಿ ಕರೆಯುವ ಸಿಗ್ನಲ್‌ಗಳು, ಕಿವಿಗಡಚಿಕ್ಕುವ ಹಾರ್ನ್ ಶಬ್ದಕ್ಕೆ ನಿತ್ಯವೂ ಬೇಸರವಾಗುತ್ತದೆ. ಇಂತಿಪ್ಪ ಬೆಂಗಳೂರಿನ ಸಂಚಾರ ದಟ್ಟಣೆಯು (Bengaluru Traffic Congestion) ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದೆ. ಡಚ್‌ನ ಲೊಕೇಷನ್ ಟೆಕ್ನಾಲಜಿ ಸಂಸ್ಥೆಯು 2023ನೇ ಸಾಲಿನ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ (TomTom Traffic Index 2023) ಬಿಡುಗಡೆ ಮಾಡಿದ್ದು, ಬೆಂಗಳೂರು ಆರನೇ ಸ್ಥಾನ ಪಡೆದಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಟಾಪ್ 10 ನಗರಗಳ ಪೈಕಿ ಬೆಂಗಳೂರು ಆರನೇ ಸ್ಥಾನ ಪಡೆದಿದೆ.
ಹಾಗೆ ನೋಡಿದರೆ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತುಸು ತಗ್ಗಿದೆ. ಏಕೆಂದರೆ, 2022ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಬೆಂಗಳೂರು ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಆರನೇ ಸ್ಥಾನಕ್ಕೆ ಕುಸಿದಿದೆ. 2022ರ ಸೂಚ್ಯಂಕದ ಪ್ರಕಾರ, ಬೆಂಗಳೂರಿನಲ್ಲಿ 10 ಕಿಲೋಮೀಟರ್ ಸಂಚರಿಸಲು 30 ನಿಮಿಷ ಬೇಕಾಗುತ್ತಿತ್ತು. ಆದರೆ, 2023ರಲ್ಲಿ ಇಷ್ಟು ದೂರ ಕ್ರಮಿಸಲು 28 ನಿಮಿಷ ಬೇಕು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಬೆಂಗಳೂರು ಆರನೇ ಸ್ಥಾನಕ್ಕೆ ಕುಸಿದಿರುವುದು ಸಮಾಧಾನಕರ ಸಂಗತಿ ಎನ್ನಲಾಗುತ್ತಿದೆ.
ಸುಮಾರು 55 ದೇಶಗಳ 387 ನಗರಗಳಲ್ಲಿ ಸಮೀಕ್ಷೆ ನಡೆಸಿ, ಸಂಚಾರ ದಟ್ಟಣೆ ಪರಿಶೀಲಿಸಿ ಸೂಚ್ಯಂಕದ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಜಗತ್ತಿನಲ್ಲೇ ಲಂಡನ್ ನಗರವು ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎನಿಸಿದೆ. ಡಬ್ಲಿನ್ ದ್ವಿತೀಯ, ಟೊರೊಂಟೊ ತೃತೀಯ, ಮಿಲಾನ್ 4, ಲಿಮಾ 5, ಬೆಂಗಳೂರು 6, ಪುಣೆ 7, ಬುಚಾರೆಸ್ಟ್ 8, ಮನಿಲಾ 9 ಹಾಗೂ ಬ್ರುಸೆಲ್ಸ್ 10ನೇ ಸ್ಥಾನ ಪಡೆದಿದೆ. ದೆಹಲಿಯು ಪಟ್ಟಿಯಲ್ಲಿ 44ನೇ ಸ್ಥಾನ ಪಡೆದಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಶೇ.20ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನ ರಸ್ತೆಗಳ ಸಾಮರ್ಥ್ಯಕ್ಕೂ ಮೀರಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇಷ್ಟಿದ್ದರೂ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ಅಂತರವಿದ್ದು, ಇನ್ನಷ್ಟು ವಾಹನಗಳಿಗೆ ಬೇಡಿಕೆ ಇದೆ. ಬೆಂಗಳೂರಿಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದಲೂ ಭಾರಿ ಪ್ರಮಾಣದಲ್ಲಿ ವಾಹನಗಳು ಆಗಮಿಸುತ್ತಿವೆ. ಬೆಂಗಳೂರಿನ 1 ಕೋಟಿ ವಾಹನಗಳ ಜತೆಗೆ ನಿತ್ಯ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ 15 ಲಕ್ಷ ವಾಹನಗಳು ಎಂಟ್ರಿಯಾಗುತ್ತಿವೆ. ಇದರಿಂದ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಇದನ್ನೂ ಓದಿ: ಟ್ರಾಫಿಕ್ ಮಧ್ಯೆ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಲಿಯೋನೆಲ್ ಮೆಸ್ಸಿ; ವಿಡಿಯೊ ವೈರಲ್
ಕಳೆದ ವರ್ಷ 2023ರಲ್ಲಿ ಪ್ರತಿ ತಿಂಗಳು ಸರಾಸರಿ 56,124 ವಾಹನಗಳು ನೋಂದಣಿಯಾಗಿವೆ. ಪ್ರತಿ ತಿಂಗಳು 13 ಸಾವಿರ ಹೊಸ ಕಾರುಗಳು, 29 ಸಾವಿರ ಹೊಸ ಬೈಕುಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಬೆಂಗಳೂರಿನಲ್ಲಿ ಈಗ ಇರುವ ಒಟ್ಟು ವಾಹನಗಳ ಸಂಖ್ಯೆ 1,14,28,331. ಇವುಗಳಲ್ಲಿ, 23,51,437 ಕಾರ್‌ಗಳಿದ್ದು, 76,77,541 ಬೈಕ್‌ಗಳು ಇವೆ. ದೆಹಲಿಯಲ್ಲಿ ಒಟ್ಟು 1,42,04,810 ವಾಹನಗಳಿದ್ದು, ಅಲ್ಲಿ ಹೊಸ ನೋಂದಣಿ ಪ್ರಮಾಣ ಇಳಿಕೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ