ಬೆಂಗಳೂರು: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಅಪಘಾತದ (Odisha Train Accident) ಹಿನ್ನೆಲೆಯಲ್ಲಿ ಒಡಿಶಾ ಮಾರ್ಗವಾಗಿ ಅಸ್ಸಾಂನ ಗುವಾಹಟಿಗೆ ತೆರಳಬೇಕಿದ್ದ ರೈಲು ಸಂಚಾರ ರದ್ದಾದ ಕಾರಣ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ರೈಲು ಪರದಾಡುವಂತಾಗಿದೆ.
ಬೆಂಗಳೂರಿನಿಂದ ತೆರಳಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಸಂಚಾರ ರದ್ದಾಗಿದೆ. ಅಪಘಾತದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಒಡಿಶಾ ಮಾರ್ಗವಾಗಿ ರೈಲು ತೆರಳಬೇಕಾದ ಕಾರಣ ರದ್ದುಗೊಳಿಸಲಾಗಿದೆ. ಹಾಗಾಗಿ, ಪ್ರಯಾಣಕ್ಕೆ ಅಣಿಯಾಗಿದ್ದ 1,294 ಮಂದಿಗೆ ತೊಂದರೆಯಾಗಿದೆ. ನೂರಾರು ಜನ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ.
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಹಾಗೂ ಗೂಡ್ಸ್ ರೈಲು ಡಿಕ್ಕಿಯಾಗಿ 70ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಐದಾರು ಬೋಗಿಗಳು ಹಳಿತಪ್ಪಿ ಬಿದ್ದಿದ್ದು, 350ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚನ ಜನರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Odisha Train Accident: ಒಡಿಶಾದಲ್ಲಿ ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ
ರೈಲು ಅಪಘಾತ ಸಂಭವಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. “ಒಡಿಶಾದಲ್ಲಿ ರೈಲು ಅಪಘಾತದ ಸುದ್ದಿ ತಿಳಿದು ದುಃಖವಾಗಿದೆ. ಅಪಘಾತದ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜತೆ ಮಾತನಾಡಿದ್ದು, ಮಾಹಿತಿ ಪಡೆದಿದ್ದೇನೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಅಫಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹತ್ತಾರು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನ ಸುಮಾರು 600-700 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.