ಆನೇಕಲ್: ಯುವತಿಯನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ (Bengaluru Honeytrap Case) ಮೂಲಕ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬನ್ನೇರುಘಟ್ಟ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರೀತಿಕ್, ಮೊಹಮ್ಮದ್ ಆಸಿಫ್, ಯಾಸೀನ್ ಪಾಷ, ಶಾಹಿದ್ ಅಲಿ, ಸಮೀರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಒಂದು ಐಫೋನ್ ಮೊಬೈಲ್, 68 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗ್ಯಾಂಗ್‌ನವರು ಯುವತಿಯೊಬ್ಬಳನ್ನು ಛೂ ಬಿಟ್ಟು ಹನಿಟ್ರ್ಯಾಪ್ ಮಾಡುತ್ತಿದ್ದರು. ಬೆಂಗಳೂರಿನ ಜೆಪಿ ನಗರ ನಿವಾಸಿ ಶಶಾಂಕ್ ಎಂಬಾತನನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ಯುವತಿ ಪ್ರೀತಿ ಪ್ರೇಮದ ನಾಟಕವಾಡಿದ್ದಳು.
ಕಳೆದ ಜನವರಿ 12ರಂದು ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿರ್ಜನ ಪ್ರದೇಶದ ಬಂಡೆಯ ಸಮೀಪ ಕರೆಸಿಕೊಂಡಿದ್ದಳು. ಈ ವೇಳೆ ಅಲ್ಲಿಗೆ ಬಂದ ಹನಿಟ್ರ್ಯಾಪ್ ಗ್ಯಾಂಗ್ ಯುವತಿಯನ್ನು ಇಲ್ಲಿಗೆ ಕರೆದುಕೊಂಡು ಬಂದು ಏನು ಮಾಡುತ್ತಿದ್ದೀಯಾ ಎಂದು ದೊಣ್ಣೆಯಿಂದ ಹಲ್ಲೆ ನಡೆಸಿದರು. ಮಾತ್ರವಲ್ಲದೆ ಶಶಾಂಕ್ ಬಳಿಯಿದ್ದ ಮೊಬೈಲ್, ಚಿನ್ನಾಭರಣವನ್ನು ಕಸಿದು ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಮೋಸ ಹೋದ ಶಶಾಂಕ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಉಮಾಮಹೇಶ್ ನೇತೃತ್ವದ ತಂಡ ಹನಿಟ್ರ್ಯಾಪ್ ನಡೆಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಪತಿಯ ಗಾಂಜಾ ದಂಧೆ ಮುಂದುವರಿಸಿದ ಖರ್ತನಾಕ್ ಕಳ್ಳಿಯ ಬಂಧನ, ಮಕ್ಕಳೇ ಅಸ್ತ್ರ
ಗಾಂಜಾ ದಂಧೆ ನಡೆಸುತ್ತಿದ್ದ ಪತಿ ಜೈಲು ಪಾಲಾದ ಬಳಿಕ ಪತ್ನಿಯೂ ಅದನ್ನೇ ಮುಂದುವರಿಸಿದ್ದು, ಇದೀಗ ಬಂಧನಕ್ಕೊಳಗಾಗಿದ್ದಾಳೆ. ಗಾಂಜಾ ತರಲು ಆಕೆಯ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ.
ಗಾಂಜಾ ದಂಧೆಗೆ ಈಕೆ ತನ್ನ 1, 3, 7 ವರ್ಷದ ಮೂವರು ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದುದು ಪತ್ತೆಯಾಗಿದೆ. ಮಕ್ಕಳ ಜತೆ ಹೋದ ಈಕೆ ಮೂರು ಬ್ಯಾಗ್‌ಗಳಲ್ಲಿ ಗಾಂಜಾ ತರುತ್ತಿದ್ದಳು. ಈಕೆಯ ಪತಿ ಮುಜ್ಜು ಎಂಬಾತ ಗಾಂಜಾ ದಂಧೆಯಲ್ಲಿ ಒಂದು ತಿಂಗಳ ಹಿಂದೆ ಜೈಲುಪಾಲಾಗಿದ್ದ. ಜೆಜೆ ನಗರ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದರು. ಪತಿ ಜೈಲು ಪಾಲಾದ ಬಳಿಕ ಪತ್ನಿ ನಗ್ಮಾ (27) ಗಾಂಜಾ ಬ್ಯುಸಿನೆಸ್ ಮುಂದುವರಿಸಿದ್ದಳು.
ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮುಜ್ಜುವನ್ನು ಜೆಜೆ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ನಂತರ ಪತ್ನಿ ನಗ್ಮಾ ತನ್ನ ಜತೆಗೆ ಮಕ್ಕಳನ್ನು ವಿಶಾಖಪಟ್ಟಣಂಗೆ ಕರೆದುಕೊಂಡು ಹೋಗಿ ಮರುದಿನ ಚೀಲದಲ್ಲಿ ಗಾಂಜಾ ಸಮೇತ ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದಳು. ಮಕ್ಕಳು, ಬ್ಯಾಗ್ ಇದ್ದರೆ ಫ್ಯಾಮಿಲಿ ಎಂದು ಪೊಲೀಸರು ಚೆಕ್ ಮಾಡುವುದಿಲ್ಲ ಎಂಬುದು ಆಕೆಯ ತಂತ್ರವಾಗಿತ್ತು.
ಇದನ್ನೂ ಓದಿ: Fire tragedy : ಶಾರ್ಟ್ ಸರ್ಕ್ಯೂಟ್‌ನಿಂದ ಮೊಬೈಲ್ ಅಂಗಡಿ ಅಗ್ನಿಗಾಹುತಿ, ಧಗಧಗ ಬೆಂಕಿ ಕಂಡು ದಿಗಿಲುಗೊಂಡ ಜನ
ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20ರಂದು ಗಾಂಜಾ ಸಮೇತ ಬಂದು ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್‌ನಲ್ಲಿ ಇಳಿಯುತ್ತಿದ್ದಾಗ ಕಲಾಸಿಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತಳಿಂದ 13 ಲಕ್ಷ ರೂ. ಮೌಲ್ಯದ 26 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಪತಿಯ ಜತೆಗೆ ಪತ್ನಿಯೂ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ