ಬೆಂಗಳೂರು: ಆನ್ಲೈನ್ ಹನಿಟ್ರ್ಯಾಪ್ ದಂಧೆ (Bengaluru Honeytrap Case) ವ್ಯಾಪ್ತಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಖ್ಯಾತ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಮೆಸೇಜು, ಅದಾದ ಮೇಲೆ ವಾಟ್ಸ್ಆ್ಯಪ್ ವಿಡಿಯೊ ಕಾಲ್ (Whatsapp Video Call). ಬಳಿಕ ರೆಕಾರ್ಡ್ ಆದ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮಾಡಿ, ಲಕ್ಷಲಕ್ಷ ಹಣಕ್ಕೆ ಬೇಡಿಕೆ ಇಡೋದು ಈ ಜಾಲದ ಕಾರ್ಯವೈಖರಿ. ಇದೀಗ ಈ ಆನ್ಲೈನ್ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದಿದ್ದ ಉದ್ಯಮಿಯೊಬ್ಬರು ಸಿಇಎನ್ ಕ್ರೈಂ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದಾರೆ.
ಈಗಂತೂ ಯಾವುದೇ ಪ್ರತಿಷ್ಠಿತ ಮಾಲ್ ಇರಲಿ, ಶಾಪಿಂಗ್ ಮಳಿಗೆಗಳೇ ಇರಲಿ ಕೊನೆಯಲ್ಲಿ ಬಿಲ್ಲಿಂಗ್ ಮಾಡುವಾಗ ಫೋನ್ ನಂಬರ್ ಕೇಳುತ್ತಾರೆ. ಗ್ರಾಹಕರೂ ಕೂಡ ಹಿಂದೆ ಮುಂದೆ ನೋಡದೆ ನಂಬರ್ ಕೊಡುತ್ತಾರೆ. ಈಗೀಗ ಅದೇ ಸಮಸ್ಯೆಗೆ ದಾರಿಯಾಗುತ್ತಿದೆ. ಹೀಗೆ ನಾವು ಯಾವುದೋ ಮಾಲ್, ಅಥವಾ ಇನ್ನೆಲ್ಲೋ ನೀಡಿದ ಫೋನ್ನಂಬರ್ನ್ನು ವಂಚಕರು ಕಾಳಸಂತೆಯಲ್ಲಿ ಖರೀದಿ ಮಾಡುತ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ನಂಬರ್ಗಳನ್ನು ಸೈಬರ್ ಕಳ್ಳರು ಇಂತಿಷ್ಟು ಹಣಕ್ಕೆ ಅಂತ ಖರೀದಿ ಮಾಡಿ, ಆ ನಂಬರ್ ಇಟ್ಟುಕೊಂಡು ಲಕ್ಷಾಂತರ ಹಣ ಗಳಿಸುತ್ತಾರೆ. ಈ ಯೋಜನೆಯನ್ನು ವ್ಯವಸ್ಥಿತವಾಗಿ ಹೆಣೆಯಲಾಗುತ್ತಿದೆ.
ಇದನ್ನೂ ಓದಿ: Bengaluru Honeytrap Case: ಬೆಂಗಳೂರಲ್ಲಿ ಹುಡುಗಿ ಛೂ ಬಿಟ್ಟು ಹನಿಟ್ರ್ಯಾಪ್; ಸುಲಿಗೆಕೋರರ ಬಂಧನ
ಇದೀಗ ದೂರು ಕೊಟ್ಟ ಉದ್ಯಮಿಯ ಫೋನ್ನಂಬರ್ನ್ನು ಪಡೆದ ವಂಚಕರ ಜಾಲ ಅವರಿಗೆ ಮೊದಲು ವಾಟ್ಸ್ಆ್ಯಪ್ನಿಂದ ಮೆಸೇಜ್ ಕಳಿಸಿದೆ. ವಾಟ್ಸ್ ಆ್ಯಪ್ ಡಿಪಿಯಲ್ಲಿ ಒಂದು ಸುಂದರ ಹುಡುಗಿಯ ಫೋಟೋ ಇತ್ತು. ಸಂದೇಶಗಳೂ ಸಖತ್ ಸ್ವೀಟ್ ಆಗಿ ಇರುತ್ತಿದ್ದವು. ಹೀಗಾಗಿ ಸಹಜವಾಗಿಯೇ ಆ ಉದ್ಯಮಿ ಮಾತುಕತೆ ಮುಂದುವರಿಸಿದ್ದರು. ಹೀಗೆ ಸ್ವಲ್ಪ ದಿನ ಆದ ಮೇಲೆ ಉದ್ಯಮಿಯ ನಂಬರ್ಗೆ ಅದೇ ವಾಟ್ಸ್ಆ್ಯಪ್ನಿಂದ ವಿಡಿಯೊ ಕಾಲ್ ಬಂದಿದೆ. ರಿಸೀವ್ ಮಾಡುತ್ತಿದ್ದಂತೆ ಹುಡುಗಿಯೊಬ್ಬಳು ಅಶ್ಲೀಲವಾಗಿ ಕುಣಿಯುತ್ತಿರುವುದು ಕಾಣಿಸಿದೆ. ಅದೇ ಉದ್ಯಮಿಯನ್ನು ಸಂಕಷ್ಟಕ್ಕೆ ನೂಕಿತು. ಹೀಗೆ ಅಶ್ಲೀಲ ಕುಣಿತದ ಸ್ಕ್ರೀನ್ಶಾಟ್ ಫೋಟೋವನ್ನು ಉದ್ಯಮಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ವಿಡಿಯೊ ಕಾಲ್ ಸ್ಕ್ರೀನ್ಶಾಟ್ ಆಗಿದ್ದರಿಂದ ಒಂದು ಫ್ರೇಮ್ನಲ್ಲಿ ಹುಡುಗಿ ಕುಣಿಯುತ್ತಿದ್ದರೆ, ಇನ್ನೊಂದು ಫ್ರೇಮ್ನಲ್ಲಿ ಉದ್ಯಮಿಯ ಮುಖ ಕಾಣುತ್ತದೆ. ಹಣ ಕೊಡದೆ ಇದ್ದರೆ ಈ ಫೋಟೋ, ವಿಡಿಯೊ ಸಾಮಾಜಿಕ ಲೀಕ್ ಮಾಡುತ್ತೇವೆ ಎಂದು ಬೆದರಿಸಿ, 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣವೇ ಉದ್ಯಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.