Site icon Vistara News

ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಿ ಪ್ರತಿಭಟನೆ- ಮಾರಾಮಾರಿ

ಕೋಡಿಹಳ್ಳಿ ಚಂದ್ರಶೇಖರ್‌

ಬೆಂಗಳೂರು: ಇತ್ತೀಚೆಗಷ್ಟೇ ಆಮ್‌ ಆದ್ಮಿ ಪಕ್ಷ ಸೇರಿರುವ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಶನಿವಾರ ಮಸಿ ಎರಚಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಗಾರರು ಹಾಗೂ ರೈತಸಂಘದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಲು ಪ್ರೆಸ್‌ಕ್ಲಬ್‌ಗೆ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಲಾಗಿದೆ. ಈ ಸಂದರ್ಭದಲ್ಲಿ ಚಂದ್ರಶೇಖರ್‌ ಜತೆಗಿದ್ದ ಕಾರ್ಯಕರ್ತರು ಮತ್ತು ಪ್ರತಿಭಟನಾಗಾರರ ನಡುವೆ ಹೊಡೆದಾಟ ನಡೆದಿದೆ.

ಕಲ್ಲು, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದು, ಇದನ್ನು ತಪ್ಪಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪ್ರತಿಭಟನೆ ನಡೆಸಿದವರು ಜೆಡಿಎಸ್‌ ಕಾರ್ಯಕರ್ತರು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಜತೆಗಿದ್ದವರು ದೂರಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಈ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2021ರಲ್ಲಿ ನಡೆದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ವೇಳೆ ಹೋರಟದ ನೇತೃತ್ವ ವಹಿಸಿದ್ದ ನೌಕರರ ಸಂಘದ ಗೌರವಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಹೋರಾಟ ನಿಲ್ಲಿಸಲು ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದರು ಎಂಬುದು ಖಾಸಗಿ ಸುದ್ದಿವಾಹಿನಿಯೊಂದು ಸ್ಟಿಂಗ್‌ ಆಪರೇಷನ್‌ ನಡೆಸಿದ ವೇಳೆ ಬೆಳಕಿಗೆ ಬಂದಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ನೌಕರರ ಸಂಘಟನೆ ಆಗ್ರಹಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಲು ಕೋಡಿಹಳ್ಳಿ ಚಂದ್ರಶೇಖರ್‌ ಪತ್ರಿಕಾಗೋಷ್ಠಿ ಕರೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ| ರಾಜಧಾನಿಗೆ ಆಶಾ ಕಾರ್ಯಕರ್ತೆಯರ ಲಗ್ಗೆ, ಬೇಡಿಕೆ ಈಡೇರಿಕೆಗಾಗಿ ಬೃಹತ್‌ ಪ್ರತಿಭಟನೆ

ರಾಜ್ಯದ ಹಲವು ಕಡೆ ರೈತ ಸಂಘಟನೆ ಮತ್ತು ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಪ್ರತಿಭಟನೆ ನಡೆಸಿವೆ. ಅವರು ಹಸಿರು ಶಾಲು ಹೊದ್ದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದು ಹಸಿರು ಸೇನೆ ಎಚ್ಚರಿಸಿದೆ.

Exit mobile version