ಬೆಂಗಳೂರು: ವಿಶ್ವ ವಿಖ್ಯಾತ ಬೆಂಗಳೂರು ಕರಗ (Bengaluru Karaga) ಆಚರಣೆಗೆ ಎರಡು ಬಣಗಳ ನಡುವೆ ಪೈಪೋಟಿ ಉಂಟಾಗಿದ್ದು, ಅನುದಾನ ಪಡೆಯಲು ನಕಲಿ ಖಾತೆ ಸೃಷ್ಟಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಕರಗ ವ್ಯವಸ್ಥಾಪನಾ ಸಮಿತಿಯ ಹಾಲಿ ಅಧ್ಯಕ್ಷ ಸತೀಶ್ ಮತ್ತು ಕಾಂಗ್ರೆಸ್ ಮಾಜಿ ಎಂಎಲ್‌ಸಿ ಪಿ.ಆರ್.ರಮೇಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಎರಡು ಬಣಗಳ ಕಿತ್ತಾಟ ಹೈ ಕೋರ್ಟ್ ಮೆಟ್ಟಿಲೇರಿದೆ.
ಈ ಬಗ್ಗೆ ಕರಗ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಸುದ್ದಿಗೋಷ್ಠಿ ನಡೆಸಿದ್ದು, ಪಿ.ಆರ್. ರಮೇಶ್ ಅವರು ಕಾನೂನು ಬಾಹಿರ ಕರಗ ಆಚರಣೆ ಸಮಿತಿ ಸ್ಥಾಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ ಕೋರ್ಟ್ ಮೊರೆ ಹೋಗಿ ಪಿ.ಆರ್. ರಮೇಶ್ ನೇತೃತ್ವದ ಕರಗ ಆಚರಣೆ ಸಮಿತಿಯನ್ನು ರದ್ದು ಮಾಡಬೇಕು ಎಂದು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಕರಗ ಆಚರಣೆಗೆ ಬಿಬಿಎಂಪಿ ನೀಡುವ ಅನುದಾನದ ಪಡೆಯಲು ನಕಲಿ ಅಕೌಂಟ್ ಸೃಷ್ಟಿಸಿದ್ದಾರೆ. ಈ ಬಾರಿ ಕರಗ ಉತ್ಸವ ಮಾಡಲು ಕರಗ ವ್ಯವಸ್ಥಾಪನಾ ಸಮಿತಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಕಾಂಗ್ರೆಸ್ ಮುಖಂಡ ಪಿ.ಆರ್. ರಮೇಶ್ ತೊಂದರೆ ಕೊಡುತ್ತಿದ್ದಾರೆ. ತಮ್ಮ ರಾಜಕೀಯ ಶಕ್ತಿ ಬಳಸಿ ವ್ಯವಸ್ಥಾಪನಾ ಸಮಿತಿಯನ್ನು ರದ್ದು ಮಾಡಲು ಮುಂದಾಗಿದ್ದಾರೆ. ಅವರು ಕಾಂಗ್ರೆಸ್ ನಾಯಕರನ್ನು ಒಳಗೊಂಡ ಉತ್ಸವ ಸಮಿತಿ ರಚನೆ ಮಾಡಿದ್ದು, ಇದು ಕಾನೂನು ಬಾಹಿರ. ಈಗಾಗಲೇ ಹೈಕೋರ್ಟ್ ಕೂಡ ಉತ್ಸವ ಸಮಿತಿಯನ್ನು ರದ್ದು ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ | Ugadi 2024: ಬಂತಿದೋ ಹೊಸ ಯುಗಾದಿ; ಬೇವು-ಬೆಲ್ಲ ತಿನ್ನೋದನ್ನ ಮರೆಯಬೇಡಿ!
ಹೊಸ ಸಮಿತಿ ರದ್ದು ಮಾಡಿದ್ದರೂ ಪಿ.ಆರ್. ರಮೇಶ್ ಸೇರಿ ಹಲವು ಕಾಂಗ್ರೆಸ್ ನಾಯಕರು ಹಣ ವಸೂಲಿಗೆ ಇಳಿದಿದ್ದು, ಕರಗ ಅನುದಾನಕ್ಕಾಗಿ ಉತ್ಸವ ಸಮಿತಿ ಹೆಸರಲ್ಲಿ ನಕಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದಾರೆ. ಇದು ಕಾನೂನು ಬಾಹಿರ, ಸರ್ಕಾರದ ಲಾಂಛನ ಬಳಸಿ ಅಕೌಂಟ್ ಓಪನ್ ಮಾಡಿ ಚಂದಾ ವಸೂಲಿ ಮಾಡುತ್ತಿದ್ದಾರೆ. ಈ ಹೊಸ ಉತ್ಸವ ಸಮಿತಿಯಲ್ಲಿ 17 ಕಾಂಗ್ರೆಸ್ ನಾಯಕರನ್ನು ಸದಸ್ಯರಾಗಿ ಮಾಡಿದ್ದಾರೆ. ಸಿಎಂ, ಡಿಸಿಎಂ ಹೆಸರು ಹೇಳಿಕೊಂಡ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹಾಲಿ ವ್ಯವಸ್ಥಾಪನಾ ಸಮಿತಿಯನ್ನು ರದ್ದು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಅದ್ಧೂರಿ ಕರಗ
ಈ ಬಾರಿ ಅದ್ಧೂರಿಯಾಗಿ ಕರಗ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕರಗಕ್ಕೆ 75 ಲಕ್ಷದಿಂದ 1.50 ಕೋಟಿಗೆ ಅನುದಾನ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸುಮಾರು 2 ಕೋಟಿ ಹಣ ನೀಡುವ ಭರವಸೆ ಕೊಟ್ಟಿದೆ. ಆದರೆ ಕೆಲ ಕಿಡಿಗೇಡಿಗಳು 30 ದಿನಕ್ಕೆ ಉತ್ಸವ ಸಮಿತಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ ಸತೀಶ್ ಅವರು, ವಹ್ನಿಕುಲ ಕ್ಷತ್ರೀಯರು ಕರಗ ಉತ್ಸವ ಮಾಡುವುದು ಸಂಪ್ರದಾಯ. ಆದರೆ ಇದಕ್ಕೆ ಹೊರತಾಗಿರುವ ಕೆಲ ಕಿಡಿಗೇಡಿಗಳು ಪಾಲಿಕೆ ಅನುದಾನ ಏರಿಸಿದ್ದು ನೋಡಿ ಕಣ್ಣು ಬಿದ್ದಿದೆ. ಹೀಗಾಗಿ ಆ ಉತ್ಸವ ಸಮಿತಿಯನ್ನು ಹೈ ಕೋರ್ಟ್ ರದ್ದು ಮಾಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮಾಜಿ ಎಂಎಲ್‌ಸಿ ಪಿ.ಆರ್. ರಮೇಶ್ ಅವರ ನೇತೃತ್ವದಲ್ಲಿ ಈ ಎಲ್ಲಾ ಗೋಲ್ಮಾಲ್ ನಡೆದಿದೆ. ಕರಗ ಆಚರಣೆಗೆ ನೀಡುವ 1.50 ಕೋಟಿ ರೂಪಾಯಿ ನಮಗೆ ಕೊಡಿ ಎಂದು ಪಾಲಿಕೆ ಆಯುಕ್ತರಿಗೆ ಪಿ.ಆರ್. ರಮೇಶ್ ಹೇಳಿದ್ದಾರೆ. ಆದರೆ ಹೈ ಕೋರ್ಟ್‌ನಲ್ಲಿ ನಕಲಿ ಕರಗ ಉತ್ಸವ ಸಮಿತಿ ರದ್ದಾಗಿರುವ ಕಾರಣಕ್ಕೆ ಹಣ ನೀಡಲು ಒಪ್ಪಿಲ್ಲ. ಪಿ.ಆರ್. ರಮೇಶ್ ಕುತಂತ್ರದಿಂದ ಪಾಲಿಕೆ ನೀಡಬೇಕಾದ ಅನುದಾನ ಬರುವುದು ಈಗಾಗಲೇ ವಿಳಂಬವಾಗಿದೆ. ಏಪ್ರಿಲ್ 23ಕ್ಕೆ ಕರಗ ನಡೆಯಬೇಕಿದೆ, ಆದರೆ ಅನುದಾನ ವಿಳಂಬವಾದ ಕಾರಣ ಕೆಲಸ ತಡವಾಗುತ್ತಿದೆ.
ಧರ್ಮರಾಯ ಸ್ವಾಮಿ ದೇವಸ್ಥಾನದ ಹೆಸರಲ್ಲಿ ಪಿಆರ್ ರಮೇಶ್ ನಕಲಿ ಅಕೌಂಟ್ ಮಾಡಿಸಿದ್ದು, ಪಾಲಿಕೆ ಕೊಡುವ ಹಣದ ಮೇಲೆ ಕಣ್ಣು ಹಾಕಿದ್ದಾರೆ. ಈ ಮೂಲಕ ವಿಶ್ವ ವಿಖ್ಯಾತ ಕರಗೋತ್ಸವವನ್ನು ಹಾಳು ಗೆಡವಲು ಪ್ಲ್ಯಾನ್ ಮಾಡಿದ್ದಾರೆ. ಈ ಬಾರಿಯ ಕರಗೋತ್ಸವದ ವೇಳೆ ಏನಾದರೂ ಅನಾಹುತವಾದರೆ ಅದಕ್ಕೆ ಪಿ.ಆರ್. ರಮೇಶ್ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Ugadi 2024: ಯುಗಾದಿ…ಹಿಂದೂಗಳಿಗೆ ಹೊಸ ವರ್ಷದ ಆದಿ
ಸುದ್ದಿಗೋಷ್ಠಿಯಲ್ಲಿ ತಿಗಳರ ಸಮುದಾಯದ ಮುಖಂಡರು, ಮಸ್ತಾನ್ ಸಾಬ್ ದರ್ಗಾ ಪದಾಧಿಕಾರಿಗಳೂ ಭಾಗಿಯಾಗಿದ್ದರು.