ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ (Bengaluru karaga 2023) ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು ಸಕಲ ಸಿದ್ಧತೆ ನಡೆಯುತ್ತಿದೆ. ಈ ಹೊತ್ತಿನಲ್ಲೇ ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಅದ್ಧೂರಿ ಕರಗ ಉತ್ಸವಕ್ಕೆ ಕಡಿವಾಣ ಬೀಳಲಿದೆಯಾ ಎಂಬ ಅನುಮಾನ ಮೂಡಿದೆ. ಆದರೆ, ಅದ್ಧೂರಿತನಕ್ಕೆ ಯಾವುದೇ ಸಮಸ್ಯೆ ಇಲ್ಲ, ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯೂ ಜ್ಞಾನೇಂದ್ರ ಕರಗ ಹೊರಲಿದ್ದು, ಬುಧವಾರ (ಮಾ.29) ರಾತ್ರಿ 10ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧ್ವಜಸ್ಥಂಬ ನೆಡುವ ಮೂಲಕ ಕರಗಕ್ಕೆ ಚಾಲನೆ ನೀಡಲಾಗುತ್ತದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ಉತ್ಸವವನ್ನು ಅದ್ಧೂರಿಯಾಗಿ ಮಾಡುವಂತಿಲ್ಲವಾ? ಎಂಬುದರ ಕುರಿತು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷದಂತೆ ಬೆಂಗಳೂರು ಕರಗ ಉತ್ಸವ ನಡೆಯುತ್ತಿದ್ದು, ಚುನಾವಣಾ ನೀತೆ ಸಂಹಿತೆ ಇದ್ದರೂ ಜಾತ್ರೆ, ಕರಗದಂಥಹ ಕಾರ್ಯಕ್ರಮಗಳಿಗೆ ಕಡಿವಾಣ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಭಾಗಿಯಾಗಬಹುದು, ಪಕ್ಷದ ಬಾವುಟ, ಶಾಲುಗಳ ಬಳಸುವಂತಿಲ್ಲ
ಕರಗದಲ್ಲಿ ಶಾಸಕರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಬಹುದಾಗಿದೆ. ಆದರೆ ವೇದಿಕೆ ಕಾರ್ಯಕ್ರಮಗಳಾಗಲಿ, ಯಾವುದೇ ಪಕ್ಷದ ಬಾವುಟ, ಪ್ರಣಾಳಿಕೆ, ಶಾಲು ಹಾಕುವಂತಿಲ್ಲ. ಈಗಾಗಲೇ ಅನುದಾನ ಘೋಷಣೆ ಆಗಿರುವುದರಿಂದ ಕರಗ ಉತ್ಸವಕ್ಕೆ ತೊಂದರೆ ಆಗುವುದಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಅದ್ಧೂರಿಯಾಗಿ ನೆರವೇರುತ್ತದೆ ಎಂದು ತಿಳಿಸಿದ್ದಾರೆ.
ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಪ್ರತಿಕ್ರಿಯಿಸಿದ್ದು, ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳು ಕರಗ ತಯಾರಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಆಹ್ವಾನಿತ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಜನರಂತೆ ದರ್ಶನ ಮಾಡಲು ಅವಕಾಶ ಇದ್ದು, ಕರಗ ಉತ್ಸವವೂ ಈ ವರ್ಷ ಅದ್ಧೂರಿಯಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ಸವದ ವಿವರ ಹೀಗಿದೆ
ಮಾರ್ಚ್ 29ರ ರಾತ್ರಿ 10ಗಂಟೆಗೆ ರಥೋತ್ಸವ ಧ್ವಜಾರೋಹಣ
ಮಾರ್ಚ್ 30 ರಿಂದ ಏಪ್ರಿಲ್ 4ರ ವರೆಗೆ ಪ್ರತಿ ದಿನ ವಿಶೇಷ ಪೂಜೆಗಳು
ಏಪ್ರಿಲ್ 3ರಂದು ಆರತಿ ದೀಪಗಳು
ಏಪ್ರಿಲ್ 4ರಂದು ಹಸಿ ಕರಗ (ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ ಪೂಜೆ)
ಏಪ್ರಿಲ್ 5ರಂದು ಹೊಂಗಲು ಸೇವೆ
ಏಪ್ರಿಲ್ 6ರಂದು ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ
ಏಪ್ರಿಲ್ 7ರಂದು ಗಾವು ಶಾಂತಿ
ಏಪ್ರಿಲ್ 8ರಂದು ವಸಂತೋತ್ಸವ ಧ್ವಜಾರೋಹಣ
ಇದನ್ನೂ ಓದಿ: Karnataka Election: ಮೇ 10 ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ