ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ಕರಗ ಶಕ್ತ್ಯೋತ್ಸವ (Bengaluru Karaga 2023) ಆರಂಭವಾಗಿದ್ದು, ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ಕರಗವನ್ನು ಕಣ್ತುಂಬಿಕೊಂಡಿದ್ದಾರೆ. ಚೈತ್ರ ಪೌರ್ಣಿಮೆಯ ಬೆಳದಿಂಗಳಿನಲ್ಲಿ ಮಲ್ಲಿಗೆಯ ಕಂಪಿನೊಂದಿಗೆ ಕರಗ ಶಕ್ತ್ಯೋತ್ಸವ ಆರಂಭವಾಗಿದ್ದು, ರಾತ್ರಿಯಿಡೀ ಕರಗ ಮಹೋತ್ಸವ ನಡೆಯಲಿದೆ.
ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗ ಹೊರುತ್ತಿದ್ದಾರೆ. ಧರ್ಮರಾಯ ಸ್ವಾಮಿ ದೇವಾಲಯದಿಂದ ಹೊರಟ ಕರಗವು ಎಸ್‌ಪಿ ರಸ್ತೆ ಮೂಲಕ ಬೆಂಗಳೂರಿನ ಆಯ್ದ ರಸ್ತೆಗಳಲ್ಲಿ ಸಾಗಿದೆ. ವರ್ಷಕ್ಕೊಮ್ಮೆ ಐತಿಹಾಸಿಕ ಕರಗ ನಡೆಯಲಿದ್ದು, ಈ ಬಾರಿ ಕೊರೊನಾ ಭೀತಿಯೂ ಇಲ್ಲದ ಕಾರಣ ಅದ್ಧೂರಿಯಾಗಿ ನಡೆಯುತ್ತಿದೆ. ನಗರ್ತಪೇಟೆಯ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾದ ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕರಗ ಶಕ್ತ್ಯೋತ್ಸವದ ನೇರ ಪ್ರಸಾರ
ಕರಗ ಶಕ್ತ್ಯೋತ್ಸವದ ಹಿನ್ನೆಲೆಯಲ್ಲಿ ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾ ಕೂಡ ಸಿಂಗಾರಗೊಂಡಿದೆ. ಕರಗ ಸಾಗುವ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಲಕ್ಷಾಂತರ ಜನ ಕರಗವನ್ನು ಹಿಂಬಾಲಿಸಿದ್ದು, ನಗರಕ್ಕೆ ಹೊಸ ಕಳೆ ಬಂದಂತಾಗಿದೆ.
ಕರಗ ವೀಕ್ಷಣೆಗೆ ಕಾತರ
ಐತಿಹಾಸಿಕ ಕರಗ ವೀಕ್ಷಿಸಲು ಆಂಧ್ರಪ್ರದೇಶ, ತಮಿಳುನಾಡು, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ತುಮಕೂರು, ಕೋಲಾರ ಸೇರಿ ಹಲವು ನಗರಗಳಿಂದ ಜನ ಆಗಮಿಸಿದ್ದಾರೆ. ಕರಗ ಆರಂಭವಾಗುವ ಮೊದಲು ಶಾಸಕ ಉದಯ್ ಗರುಡಾಚಾರ್ ಹಾಗೂ ಅವರ ಪತ್ನಿಯು ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Bengaluru Karaga 2023: ಬೆಂಗಳೂರು ಕರಗ ಮಹೋತ್ಸವದಲ್ಲಿ ಅಗ್ನಿ ಅವಘಡ: ಕರ್ಪೂರ ಸೇವೆ ವೇಳೆ ಹೊತ್ತಿ ಉರಿದ ವಾಹನಗಳು