bಅಸಾನಿ ಚಂಡಮಾರುತದ (Cyclone Asani) ಪ್ರಭಾವ ಬೆಂಗಳೂರಿನಲ್ಲಿ ಇಂದು ಕೂಡ (ಮೇ 12) ಮುಂದುವರಿದಿದೆ. ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದಲೇ ಶುರುವಾದ ಮಳೆ (Bengaluru Rain) ಬೆಳಗ್ಗೆವರೆಗೂ ಮುಂದುವರಿದಿತ್ತು. ಇನ್ನೂ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಅಂದರೆ ಮೇ 17ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 24.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳ ಬೇಸಿಗೆಯಲ್ಲಿ ಇಷ್ಟು ಕಡಿಮೆ ತಾಪಮಾನ ದಾಖಲಾಗಿತ್ತು. ನಿನ್ನೆ (ಮೇ 11) ಕೂಡ ಗರಿಷ್ಠ ತಾಪಮಾನ 25ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಿನ್ನೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ತುಮಕೂರು, ಮೈಸೂರು, ದಾವಣಗೆರೆ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಇಡೀ ದಿನ ಮೋಡ ಮುಸುಕಿದ ವಾತಾವರಣ, ತುಂತುರು ಮಳೆಯಿತ್ತು. ಸಂಜೆಯ ಹೊತ್ತಿಗೆ ಧಾರಾಕಾರ ಮಳೆ ಸುರಿದು ಜನಸಂಚಾರ, ವಾಹನ ಸಂಚಾರಗಳು ಅಸ್ತವ್ಯಸ್ತಗೊಂಡಿದ್ದವು. ಬೆಂಗಳೂರಿನಲ್ಲಿ ಇಂದು ಮುಂಜಾನೆ ಮಳೆ, ಚಳಿಯ ವಾತಾವರಣವಿದ್ದು, ತುಂತುರು ಮಳೆಯಾಗುತ್ತಲೇ ಇದೆ. ಈ ಮಧ್ಯೆ ಬೆಂಗಳೂರಿಗರು ಸೋಷಿಯಲ್ ಮೀಡಿಯಾದಲ್ಲಿ ಮಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ʼದೇಶದ ಅನೇಕ ರಾಜ್ಯಗಳಲ್ಲಿ ಬಿರುಬಿಸಿಲಿದ್ದರೆ ನಮ್ಮ ಬೆಂಗಳೂರಿನಲ್ಲಿ ಚಳಿ ಶುರುವಾಗಿದೆʼ, ನಾವು ಬೆಂಗಳೂರಿನಲ್ಲಿದ್ದೇವೋ, ಯಾವುದಾದರೂ ಗುಡ್ಡಗಾಡು ಪ್ರದೇಶದಲ್ಲಿದ್ದೇವೋ ಎಂದು ತಿಳಿಯುತ್ತಿಲ್ಲʼ ʼಇದು ಯಾವ ಕಾಲ ಎಂಬುದೇ ಅರ್ಥವಾಗುತ್ತಿಲ್ಲʼ ಎಂಬಿತ್ಯಾದಿ ಕ್ಯಾಪ್ಷನ್‌ಗಳನ್ನೊಳಗೊಂಡ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು Bengaluru Weather ಹ್ಯಾಷ್‌ಟ್ಯಾಗ್‌ನಡಿ ಶೇರ್ ಆಗುತ್ತಿವೆ.
ಇದನ್ನೂ ಓದಿ | ಕೊಪ್ಪಳದಲ್ಲಿ ಮಳೆಯಿಂದ ನೆಲಕ್ಕುರುಳಿದ ಬೆಳೆ; ನೀರು ತುಂಬಿದ ಗುಂಡಿಗೆ ಬಿದ್ದು ಬಾಲಕಿ ಸಾವು
ಇಂದೂ ಮಳೆ
ಅಸಾನಿ ಚಂಡಮಾರುತ ತನ್ನ ಬಲವನ್ನು ತಗ್ಗಿಸಿದ್ದರೂ ಮಳೆ ನಿಂತಿಲ್ಲ. ಇಂದು ಕೂಡ ಬೆಂಗಳೂರು, ಕರ್ನಾಟಕದ ಕರಾವಳಿ ಪ್ರದೇಶಗಳು, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ, ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಗುಡುಗ-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಕಳೆದ 2-25ದಿನಗಳಿಂದಲೂ ಸಂಜೆ ಹೊತ್ತು ಮಳೆಯಾಗುತ್ತಲೇ ಇತ್ತು. ಹಗಲೆಲ್ಲ ಭರ್ಜರಿ ಬಿಸಿಲು, ಉಷ್ಣತೆ ಇದ್ದರೂ ಸಂಜೆ ಹೊತ್ತಿಗೆ ಗುಡುಗು-ಮಿಂಚು ಸಹಿತ ಮಳೆ ಸುರಿಯುತ್ತಿತ್ತು. ಆದರೆ ಅಸಾನಿ ಚಂಡಮಾರುತದಿಂದಾಗಿ ಈಗೊಂದು ಮೂರ್ನಾಲ್ಕು ದಿನಗಳಿಂದ ಮುಂಜಾನೆಯಿಂದಲೇ ಮಳೆ ಬೀಳುತ್ತಿದೆ.
ಇದನ್ನೂ ಓದಿ | ಶಿವಮೊಗ್ಗ,ಬೆಂಗಳೂರು,ಮೈಸೂರನ್ನು ತೊಯ್ದ ಭಾರೀ ಮಳೆ