ಅಬುಧಾಬಿಯಲ್ಲಿ ದೊಡ್ಡಮಟ್ಟದಲ್ಲಿ ನಡೆಯುವ ಲಾಟರಿ ಫಲಿತಾಂಶ ಪ್ರಕಟಣೆ ಕಾರ್ಯಕ್ರಮ, ಬಿಗ್ ಟಿಕೆಟ್ ಲೈವ್ ಶೋದಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್ ವಟಕ್ಕೆ ಕೋರೋತ್ ಎಂಬುವರು 20 ಮಿಲಿಯನ್ ದಿಹ್ರಾಮ್ ಅಂದರೆ ಅಂದಾಜು 44,75,00,000 ರೂಪಾಯಿ ಗೆದ್ದಿದ್ದಾರೆ. ಈ ಬಿಗ್ ಟಿಕೆಟ್ ಒಂದು ನೇರಪ್ರಸಾರದ ಶೋ ಆಗಿದ್ದು, ಇದರಲ್ಲಿ ಲಾಟರಿ ವಿಜೇತರ ಹೆಸರು ಘೋಷಿಸಲಾಗುತ್ತದೆ. ಬಿಗ್ ಟಿಕೆಟ್ನವರು ನೀಡುವ ಲಾಟರಿ ಟಿಕೆಟ್ನ್ನು ವಿಶ್ವದಲ್ಲಿ ಯಾವ ದೇಶದಲ್ಲಿ, ಯಾವುದೇ ಭಾಗದಲ್ಲಿ ಇರುವವರೂ ಕೊಳ್ಳಬಹುದಾಗಿದ್ದು, ವಿಜೇತರು ಯಾರೆಂಬುದನ್ನು ಈ ಶೋದಲ್ಲಿ ಘೋಷಿಸಲಾಗುತ್ತದೆ. ಹಾಗೇ, ಅವರು ಹಣ ಗೆದ್ದರೋ, ಐಷಾರಾಮಿ ಕಾರು ಗೆದ್ದರೋ ಎಂಬುದನ್ನು ಇಲ್ಲಿ ತಿಳಿಸಲಾಗುತ್ತದೆ. ಅದರಲ್ಲಿ ಈ ಸಲ ಅರುಣ್ ಕುಮಾರ್ ಗೆದ್ದು ಬೀಗಿದ್ದಾರೆ.
ಈ ಅರುಣ್ ಅವರು ಅಬುಧಾಬಿಯ ಬಿಗ್ ಟಿಕೆಟ್ ಬಗ್ಗೆ ಕೇಳಿ, ತಿಳಿದುಕೊಂಡಿದ್ದು ಅವರ ಸ್ನೇಹಿತರಿಂದ. ಅದಾದ ಮೇಲೆ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿದ್ದರು. ಮೊದಲೊಮ್ಮೆ ಟಿಕೆಟ್ ಖರೀದಿ ಮಾಡಿದಾಗ ಯಾವುದೇ ಗಿಫ್ಟ್ ಆಗಲಿ, ಹಣವಾಗಲೀ ಬಂದಿರಲಿಲ್ಲ. ಮಾರ್ಚ್ 22ರಂದು ಬಿಗ್ ಟಿಕೆಟ್ ವೆಬ್ಸೈಟ್ನಿಂದ 2ನೇ ಬಾರಿಗೆ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಅದರ ಫಲಿತಾಂಶ ಏಪ್ರಿಲ್ 4ರಂದು ಘೋಷಣೆಯಾಗಿದೆ. ಲೈವ್ ಶೋದಲ್ಲಿ ಅರುಣ್ ಹೆಸರನ್ನು ಪ್ರಕಟಿಸಿದ ನಂತರ, ಕಾರ್ಯಕ್ರಮದ ನಿರೂಪಕರು ಅರುಣ್ ಅವರಿಗೆ ಕರೆ ಮಾಡಿ, ಅವರು ಗೆದ್ದ ವಿಷಯವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: 40 ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು; 88ನೇ ವರ್ಷದಲ್ಲಿ 5 ಕೋಟಿ ರೂ. ಲಾಟರಿ ಹಣ ಪಡೆದು ಶ್ರೀಮಂತನಾದ ಅಜ್ಜ!
ನಂಬರ್ ಬ್ಲಾಕ್ ಮಾಡಿದ್ದ ಅರುಣ್ಕುಮಾರ್
ಅರುಣ್ ಕುಮಾರ್ ಅವರು ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ ಅದರ ಫಲಿತಾಂಶದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಬಿಗ್ಟಿಕೆಟ್ ಲೈವ್ ಶೋವನ್ನೂ ನೋಡಿರಲಿಲ್ಲ. ಅಷ್ಟಾದ ಮೇಲೆ ಕಾರ್ಯಕ್ರಮ ನಿರೂಪಕರು ಅವರಿಗೆ ಕರೆ ಮಾಡಿ, ‘ನೀವು 20 ಮಿಲಿಯನ್ ದಿಹ್ರಾಮ್ (ಅಬುಧಾಬಿಯ ಕರೆನ್ಸಿ) ಗೆದ್ದಿದ್ದೀರಿ ಎಂದು ಹೇಳಿದರೆ, ಅವರು ನಂಬಲೂ ಸಿದ್ಧರಿರಲಿಲ್ಲ. ಇದು ಪಕ್ಕಾ ವಂಚನೆ. ಇದ್ಯಾವುದೋ ಸ್ಕ್ಯಾಮ್ ನಂಬರ್ ಎಂದು ಹೇಳಿ, ಆ ಕರೆ ಕಟ್ ಮಾಡಿದ್ದಲ್ಲದೆ, ಅದನ್ನು ಬ್ಲಾಕ್ ಮಾಡಿದ್ದಂತೆ. ಅದಾದ ಮೇಲೆ ಬಿಗ್ ಟಿಕೆಟ್ನವರು ಮತ್ತೊಂದು ನಂಬರ್ನಿಂದ ಅರುಣ್ಗೆ ಕರೆ ಮಾಡಿ, ವಿಷಯ ತಿಳಿಸಿದಾಗಲೇ ಖಚಿತವಾಯಿತಂತೆ.