ಬೆಂಗಳೂರು: ಆಸ್ತಿಗಾಗಿ 1 ಕೋಟಿ ರೂಪಾಯಿ ಸುಪಾರಿ ನೀಡಿ ಅಪ್ಪನನ್ನೇ ಹತ್ಯೆ (Bengaluru Murder case) ಮಾಡಿಸಿದ ಮಗನ ಬಂಧನವಾಗಿದೆ. ಜತೆಗೆ ಸುಪಾರಿ ಪಡೆದವರನ್ನು ಜೈಲಿಗೆ ಅಟ್ಟಿದ್ದಾರೆ. ಕಳೆದ ಫೆಬ್ರವರಿ 13ರ ಬೆಳಗ್ಗೆ 10 ಗಂಟೆ ಸುಮಾರಿಗೆ ನಾರಾಯಣ ಸ್ವಾಮಿ ಅವರನ್ನು (70) ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಗೆ ಸುಪಾರಿ ನೀಡಿ ಬಳಿಕ ಏನೂ ಗೊತ್ತಿಲ್ಲದಂತೆ ತಂದೆಯ ಅಂತ್ಯಕ್ರಿಯೆಯನ್ನು ಪುತ್ರ ಮಣಿಕಂಠ ಮಾಡಿ ಮುಗಿಸಿದ್ದ. ಆದರೆ, ತನಿಖೆ ಕೈಗೊಂಡ ಪೊಲೀಸರ ಮುಂದೆ ಸುಪಾರಿ ಕೊಟ್ಟ ವಿಚಾರವನ್ನು ಮಣಿಕಂಠ ಬಾಯಿಬಿಟ್ಟಿದ್ದಾನೆ.
ಮಣಿಕಂಠ ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿ ಹೊರಬಂದ ಬಳಿಕ ಎರಡನೇ ಮದುವೆಯಾಗಿದ್ದ. ಆದರೆ, ಈ ಮಧ್ಯೆ ಬೇರೊಬ್ಬ ಮಹಿಳೆ ಜತೆಗೆ ಅಕ್ರಮ ಸಂಬಂಧ ಹೊಂದಿದ್ದು ಗೊತ್ತಾಗಿ ಎರಡನೇ ಪತ್ನಿ ಮಣಿಕಂಠನಿಂದ ದೂರವಿದ್ದಳು. ಈ ಕಿರಾತಕ ಮೂರ್ನಾಲ್ಕು ತಿಂಗಳ ಹಿಂದೆ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಯತ್ನ ಮಾಡಿದ್ದ ಎನ್ನಲಾಗಿದೆ. ಆದರೆ ಕೇಸ್ ದಾಖಲಿಸುವುದು ಬಿಟ್ಟು ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಇನ್ನು ಈತನೊಂದಿಗೆ ಸಂಸಾರ ಅಸಾಧ್ಯ ಎಂದು ಡಿವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಆದರೆ ಡಿವೋರ್ಸ್ ಕೊಡುವುದು ಬೇಡ, ಡಿವೋರ್ಸ್ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು. ಅವರ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಒಂದು ಸೈಟ್ ಅನ್ನು ಅವರ ಹೆಸರಿಗೆ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದರು. ಹೀಗಾಗಿ ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ಸೈಟ್ ರಿಜಿಸ್ಟ್ರೇಷನ್ ಮಾಡಲು ಮುಂದಾಗಿದ್ದರು. ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹಾಗಾಗಿ ತಂದೆ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: Mysore Balloon Blast: ನಾಮಕರಣದಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಅಪಾಯದಿಂದ ಪಾರಾದ ಮಗು, ವ್ಯಕ್ತಿಗೆ ಗಾಯ
ಸುಪಾರಿ ಪಡೆದವರು ಕಂಬಿ ಹಿಂದೆ ಲಾಕ್
ಮಣಿಕಂಠನಿಂದ 1 ಕೋಟಿ ರೂ. ಸುಪಾರಿ ಪಡೆದಿದ್ದ ಶಿವಕುಮಾರ್ ಅಲಿಯಾಸ್ ಶಿವ್, ನವೀನ್ ಕುಮಾರ್‌ನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಲಾಟ್‌ನಲ್ಲಿ ಫೆಬ್ರವರಿ 13ರ ಬೆಳಗ್ಗೆ ಕೊಲೆ ಮಾಡಿ ಬೈಕ್‌ನಲ್ಲಿ ಪರಾರಿ ಆಗಿದ್ದರು. ಇತ್ತ ಮಣಿಕಂಠ ತಾನೇ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಾಗ ತಾನೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿದ್ದ. ತನಿಖೆಯನ್ನು ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಸಿನಿಮಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ