ಬೆಂಗಳೂರು: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Bengaluru News) ತಿಳಿಸಿದರು.
ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ರಾಜ ಪ್ರಭುತ್ವ ಇದ್ದಾಗ ಮಹಾರಾಜರೇ ಪ್ರಜೆಗಳಿಗೆ ಸಂತೋಷವಾಗುವ ರೀತಿ ರಾಜ್ಯಭಾರ ಮಾಡುತ್ತ ಇದ್ದರು. ರಾಮ ಇದಕ್ಕೆ ಆದರ್ಶ ಪುರುಷ. ಆದರೆ ಇಂದು ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಸಮಾಜಕ್ಕೆ ಹಿತವಾಗುವಂತೆ ಬಾಳಬೇಕು. ಇತರರಿಗೆ ನೆಮ್ಮದಿ, ಸಂಭ್ರಮ ನೀಡುವ ಉದಾತ್ತ ಮನೋಭಾವ ರೂಢಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು.
ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್ ಸಿಂಗ್
ಶ್ರೀ ಭಂಡಾರ ಕೇರಿ ಗುರುಗಳು ವೇದವ್ಯಾಸರ ಜಯಂತಿಯನ್ನು ರಾಷ್ಟ್ರಗುರು ವೇದವ್ಯಾಸ ಜಯಂತಿಯನ್ನಾಗಿ ಆಚರಿಸಬೇಕೆಂದು ಸಂಕಲ್ಪ ಮಾಡಿ, ಆ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ಪಂಡಿತರಿಗೆ, ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ನೀಡಿ ಗೌರವಾದರಗಳನ್ನು ದಯ ಪಾಲಿಸಿದ್ದಾರೆ. ಶ್ರೀ ಭಂಡಾರಕೇರಿ ಗುರುಗಳ ಆಶಯ ಈಡೇರಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವಾನ್ ವೇದವ್ಯಾಸರ ಜಯಂತಿಯನ್ನು ಎಲ್ಲರೂ ಸಂಭ್ರಮಿಸುವಂತಾಗಲಿ ಎಂದು ಪೇಜಾವರ ಶ್ರೀಗಳು ಆಶಿಸಿದರು.
ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವದಲ್ಲಿ ಶ್ರೀ ಪೇಜಾವರ ಶ್ರೀಗಳು ವಿಶೇಷ ಸಾನಿಧ್ಯ ವಹಿಸಿ ಎಲ್ಲಾ ಕಾರ್ಯವನ್ನು ಸಾಂಗವಾಗಿ ನೆರವೇರಿಸಿ ಕೊಟ್ಟಿದ್ದು ವಿಶ್ವದ ಹೆಮ್ಮೆ ಎಂದು ತಿಳಿಸಿದರು.
70 ಜನರಿಗೆ ಸನ್ಮಾನ ಸಂಕಲ್ಪ
ಶ್ರೀ ವೇದವ್ಯಾಸ ಜಯಂತಿ ಸಂದರ್ಭದಲ್ಲಿ ಮೂವರು ಪಂಡಿತರಿಗೆ ಶ್ರೀಮಠ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇದರೊಂದಿಗೆ ನಮ್ಮ ಎಪ್ಪತ್ತನೇ ವರ್ಧಂತಿ ಸಮಾರಂಭವೂ ನಡೆಯುತ್ತಿದ್ದು, ಈ ವರ್ಷ ಪೂರ್ಣ 70 ಜನ ಪಂಡಿತರಿಗೆ ಸನ್ಮಾನ ಮತ್ತು ಗೌರವವನ್ನು ಮಾಡಿ ಅವರನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಂಡಾರ ಕೇರಿ ಶ್ರೀಗಳು ತಿಳಿಸಿದರು.
ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.
ಪ್ರಶಸ್ತಿ ಪ್ರದಾನ
ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ಅವರಿಗೆ (1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ ಅವರಿಗೆ (ರಾಜಹಂಸ ಪ್ರಶಸ್ತಿ), ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ ಅವರಿಗೆ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನ ಪತ್ರ ನೀಡಿ, ಗೌರವಿಸಲಾಯಿತು.
ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಶ್ರೀ ಭಂಡಾರಕೇರಿ ಶ್ರೀಗಳು ‘ಶ್ರೀ ರಾಮ ಲಲನ ಲಾಲನ ಲಲಾಮ ತೀರ್ಥ’ ಎಂದು ಬಿರುದು ನೀಡಿ, ಸನ್ಮಾನಿಸಿದರು. ನೂರಾರು ಜನ ವಿದ್ವಾಂಸರು, ಪಂಡಿತರು ಇದಕ್ಕೆ ಸಾಕ್ಷಿಯಾದರು.