Site icon Vistara News

Bengaluru News : ಹಿಡಿಯಲು ಬಂದ ಹೆಡ್‌ ಕಾನ್ಸ್‌ಟೇಬಲ್‌ಗೆ ಚಾಕು ಹಾಕಿದ ಕಿರಾತಕ

Hasankhan and sydhsmivula

ಬೆಂಗಳೂರು: ಬೆಂಗಳೂರಲ್ಲಿ (Bengaluru News) ಆರೋಪಿಯನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿ ಹಲ್ಲೆಗೊಳಗಾಗಿದ್ದಾರೆ. ಸದಾಶಿವನಗರ ಠಾಣೆಯ (Sadashiva nagara police station) ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಎಂಬುವವರು ಚಾಕು ಇರಿತಕ್ಕೆ ಒಳಗಾದವರು.

ಹಸನ್ ಖಾನ್ ಎಂಬಾತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಸಿಸಿಬಿಯ ಓ.ಸಿ.ಡಬ್ಲ್ಯೂ ವಿಭಾಗದ ಸಿಬ್ಬಂದಿ ಸೂಚನೆ ಮೇರೆಗೆ ಆರೋಪಿಯ ಬಂಧನಕ್ಕೆ ಸೈಯದ್‌ ಸಮೀವುಲ್ಲಾ ತೆರಳಿದ್ದರು. ಹೆಚ್.ಕೆ.ಪಿ ದರ್ಗಾದ ಸರ್ಕಲ್‌ನ ಗೂಡ್ಸ್‌ ಆಟೋ ಸ್ಟ್ಯಾಂಡ್‌ ಬಳಿ ನಿಂತಿದ್ದ ಹಸನ್‌ ಖಾನ್ ಕಂಡೊಡನೆ ಆತನನ್ನು ಹಿಡಿಯಲು ಸೈಯದ್‌ ಸಮೀವುಲ್ಲಾ ಹೋಗಿದ್ದಾರೆ.

ಈ ವೇಳೆ ಪೊಲೀಸ್‌ರಿಂದ ತಪ್ಪಿಸಿಕೊಳ್ಳಲು ತನ್ನ ಬಳಿ ಇದ್ದ ಚೂರಿಯನ್ನು ತೋರಿಸಲು ಮುಂದಾಗಿದ್ದಾನೆ. ಇದಕ್ಕೆ ಹೆಡ್‌ ಕಾನ್ಸ್‌ಟೇಬಲ್‌ ಜಗ್ಗದೆ ಇದ್ದಾಗ ಸಾರ್ವಜನಿಕರ ಎದುರೇ ಚಾಕು ಇರಿದು, ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರ ನೆರವಿನಿಂದ ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್ ಸೈಯದ್ ಸಮಿವುಲ್ಲಾ ಬಚಾವ್ ಆಗಿದ್ದಾರೆ.

ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಸೈಯದ್‌ ಅಪಾಯದಿಂದ ಪಾರಾಗಿದ್ದು ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Weather : ವಾರಪೂರ್ತಿ ಬಿಸಿಲು ಇರಲಿದೆ, ಭಾರಿ ಮಳೆಯೂ ಬರಲಿದೆ!

ಮಹಿಳಾ ಪಿಎಸ್‌ಐ ಮೇಲೆ ಬೈಕ್‌ ಸವಾರನ ದರ್ಪ

ಬೆಂಗಳೂರಿನ ಗೋವಿಂದರಾಜನಗರದ ಸುಬ್ಬಣ್ಣ ಗಾರ್ಡನ್ ಬಳಿ ಪ್ರೊಬೆಷನರಿ ಮಹಿಳಾ ಪಿಎಸ್ಐ ಮೇಲೆ ವ್ಯಕ್ತಿಯೊಬ್ಬ ದರ್ಪ ತೋರಿದ್ದಾನೆ. ವೇಗವಾಗಿ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದರ್ಪ ತೋರಿ ನಿಂದಿಸಿದ್ದಾನೆ. ಜತೆಗೆ ಬೈಕ್‌ನಿಂದ ಪಿಎಸ್ಐ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ.

ಸುಬ್ಬಣ್ಣ ಗಾರ್ಡನ್ ಬಳಿ ಪ್ರೊಬೆಷನರಿ ಮಹಿಳಾ ಪಿಎಸ್ಐ ಅಶ್ವಿನಿ ಹಿಪ್ಪರಗಿ ಗಸ್ತಿನಲ್ಲಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ರಾಯಲ್ ಎನ್ಫೀಲ್ಡ್ ಬೈಕನಲ್ಲಿ ವೇಗವಾಗಿ ಸವಾರ ಬರುತ್ತಿದ್ದ. ಈ ವೇಳೆ ಬೈಕ್ ತಡೆದು ಬುದ್ದಿವಾದ ಹೇಳಿ ಕಳಿಸಿದ್ದರು. ನಂತರ ಪಿಎಸ್ಐ ಬೈಕ್ ಹಿಂಬಾಲಿಸಿ ತನ್ನ ಬೈಕ್‌ನಿಂದ ಡಿಕ್ಕಿ ಹೊಡೆದು, ನನ್ನ ಹತ್ತಿರ ಇಟ್ಟುಕೊಂಡರೆ ಇದೇ ಗತಿ ಎಂದು ಧಮ್ಕಿ ಹಾಕಿ ಎಸ್ಕೇಪ್ ಹಾಕಿದ್ದಾನೆ.

Bharath

ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಪಿಎಸ್ಐ ಅಶ್ವಿನಿ ಹಿಪ್ಪರಗಿ ರಸ್ತೆ ಮೇಲೆ ಬಿದ್ದು, ಸಣ್ಣ- ಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ಬದಿಯ ಸಿಸಿಟಿವಿ ಪರಿಶೀಲನೆ ಗೋವಿಂದರಾಜನಗರ ನಿವಾಸಿ ಭರತ್ ಎಂಬಾತನನ್ನು ಬಂಧಿಸಲಾಗಿದೆ. ಐಪಿಸಿ 353, 279, 337,504 ಅಡಿಯಲ್ಲಿ ಪೊಲೀಸ್ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ಹಾಗೂ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಂಧಿತ ಆರೋಪಿ ಮೇಲೆ ರೌಡಿಶೀಟ್ ತೆರೆಯಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version